ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ಏಷ್ಯಾದ ಅತಿ ಎತ್ತರದ ಶ್ರೀರಾಮನ ಪ್ರತಿಮೆ; ಪರ್ತಗಾಳಿ ಮಠಕ್ಕೆ ದಾಖಲೆ ಗರಿ

Pakka News Web • 27 ಆಗಸ್ಟ್ 2026,

ಪರ್ತಗಾಳಿ: ಗೋವಾದ ಕಾಣಕೋಣದ ಪರ್ತಗಾಳಿ ಆದರ್ಶ ಧಾಮದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಭವ್ಯ ಶ್ರೀರಾಮಚಂದ್ರನ ಕಂಚಿನ ಪ್ರತಿಮೆ ಇದೀಗ ಏಷ್ಯಾ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.

78.74 ಅಡಿ (24 ಮೀಟರ್) ಎತ್ತರದ ಈ ಪ್ರತಿಮೆಯನ್ನು ‘ಏಷ್ಯಾದಲ್ಲೇ ಅತಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆ’ ಎಂದು ಗುರುತಿಸಿ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಅಧಿಕೃತವಾಗಿ ತನ್ನ ದಾಖಲೆಯಲ್ಲಿ ಸೇರ್ಪಡೆಗೊಳಿಸಿದೆ.

ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಪ್ರತಿಮೆ ಪರ್ತಗಾಳಿ ಕ್ಷೇತ್ರದ ಪ್ರಮುಖ ಆಕರ್ಷಣೆಯಾಗಿ ಮೂಡಿಬಂದಿದೆ. ಬುಡದಿಂದ 24 ಮೀಟರ್ ಎತ್ತರ ಹೊಂದಿರುವ ಪ್ರತಿಮೆಯ ಭವ್ಯತೆ ಇದೀಗ ಅಂತರರಾಷ್ಟ್ರೀಯ ದಾಖಲೆ ಸಂಸ್ಥೆಯ ಮಾನ್ಯತೆಯ ಮೂಲಕ ಮತ್ತಷ್ಟು ಗಮನ ಸೆಳೆದಿದೆ.

ಖ್ಯಾತ ಶಿಲ್ಪಿ ಪದ್ಮಭೂಷಣ ದಿವಂಗತ ರಾಮ್ ಸುತಾರ್ ಹಾಗೂ ಅವರ ಪುತ್ರ ಅನಿಲ್ ಸುತಾರ್ ಅವರು ಈ ಕಂಚಿನ ಪ್ರತಿಮೆಯನ್ನು ರೂಪಿಸಿದ್ದಾರೆ. ಭಾರತೀಯ ಶಿಲ್ಪಕಲೆಯ ಪರಂಪರೆ ಹಾಗೂ ಆಧುನಿಕ ತಂತ್ರಜ್ಞಾನದ ಸಮನ್ವಯದಲ್ಲಿ ರೂಪುಗೊಂಡಿರುವ ಈ ಕೃತಿ ಪರ್ತಗಾಳಿ ಮಠದ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವಕ್ಕೆ ಮತ್ತೊಂದು ಆಯಾಮ ನೀಡಿದೆ.

ಪ್ರತಿಮೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲೋಕಾರ್ಪಣೆಗೊಳಿಸಿದ್ದರು. ಇದೀಗ ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್’ ಸಂಸ್ಥೆಯಿಂದ ಅಧಿಕೃತ ಪ್ರಮಾಣಪತ್ರ ದೊರೆತಿರುವುದು ಮಠದ ಭಕ್ತರು ಹಾಗೂ ಅನುಯಾಯಿಗಳಲ್ಲಿ ಸಂತಸ ಮೂಡಿಸಿದೆ.

ಧಾರ್ಮಿಕ ಮಹತ್ವದ ಜೊತೆಗೆ ಶಿಲ್ಪಕಲೆಯ ವೈಶಿಷ್ಟ್ಯದಿಂದಲೂ ಗಮನ ಸೆಳೆಯುತ್ತಿರುವ ಈ ಶ್ರೀರಾಮನ ಪ್ರತಿಮೆ, ಪರ್ತಗಾಳಿ ಕ್ಷೇತ್ರದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ. ಏಷ್ಯಾ ಮಟ್ಟದ ದಾಖಲೆಗೆ ಸೇರ್ಪಡೆಯಾಗಿರುವುದು ಪರ್ತಗಾಳಿ ಮಠದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ಗುರುತಿಸಿಕೊಂಡಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250