ಸಿದ್ದಾಪುರ: ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ಸಮಾನತೆಯ ಬೆಳಕು ತೋರಿದ ಬ್ರಹ್ಮಶ್ರೀ ನಾರಾಯಣಗುರುಗಳ ಆದರ್ಶಗಳನ್ನು ಇಂದಿನ ಸಮಾಜವೂ ಅಳವಡಿಸಿಕೊಳ್ಳಬೇಕು ಎಂದು ಶಿರಸಿ–ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಸಿದ್ದಾಪುರದ ಪಟ್ಟಣದ ಬಾಲಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ್ ಹಾಗೂ ತಾಲೂಕು ನಾಮಧಾರಿ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇರಳದಲ್ಲಿ ಬೇರೂರಿದ್ದ ಜಾತಿ ವ್ಯವಸ್ಥೆಯ ವಿರುದ್ಧ ನಾರಾಯಣಗುರುಗಳು ನಡೆಸಿದ ಸಾಮಾಜಿಕ ಸುಧಾರಣೆಯ ಹೋರಾಟವು ಶೋಷಿತ ಸಮುದಾಯಗಳಿಗೆ ಹೊಸ ದಿಕ್ಕು ನೀಡಿತು. ಸಮಾಜದಲ್ಲಿ ಸಮಾನತೆ ಮತ್ತು ಸಹಬಾಳ್ವೆ ಬೆಳೆಸುವ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಇದೇ ರೀತಿ ವಚನಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕೊಡುಗೆ ನೀಡಿದ ನುಲಿಯ ಚಂದಯ್ಯ ಅವರ ವಿಚಾರಧಾರೆಗಳನ್ನೂ ಮುಂದಿನ ಪೀಳಿಗೆಗೆ ತಲುಪಿಸುವ ಅಗತ್ಯವಿದೆ ಎಂದು ಹೇಳಿದರು.
ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಅವರು ನಾರಾಯಣಗುರು ಹಾಗೂ ನುಲಿಯ ಚಂದಯ್ಯ ಅವರ ಜೀವನ, ಸಾಮಾಜಿಕ ಚಿಂತನೆ ಮತ್ತು ಸುಧಾರಣಾ ಕಾರ್ಯಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜಿಬೈಲ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ತಾಲೂಕು ಪಂಚಾಯತ ಇಒ ದೇವರಾಜ ಹಿತ್ತಲಕೊಪ್ಪ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಹಮ್ಮದ್ ಯಾಕೂಬ್, ಸಿಪಿಐ ಜೆ.ಬಿ. ಸೀತಾರಾಮ ಹಾಗೂ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ನಾಯ್ಕ ಉಪಸ್ಥಿತರಿದ್ದರು.
ಅರುಣ ನಾಯ್ಕ ಸುಂಕತ್ತಿ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ನಾಯ್ಕ ಐದ್ನಳ್ಳಿ ಪ್ರಾರ್ಥಿಸಿದರು. ತಹಶೀಲ್ದಾರ ರಮೇಶ ಹೆಗಡೆ ಸ್ವಾಗತಿಸಿದರು. ಶಿರಸ್ತೆದಾರ ಜಿ.ಎಲ್. ಶ್ಯಾಮಸುಂದರ ಪ್ರಾಸ್ತಾವಿಕ ಮಾತನಾಡಿದರು.
ಜಯಂತಿ ಅಂಗವಾಗಿ ನಾರಾಯಣಗುರುಗಳ ಭಾವಚಿತ್ರವನ್ನು ಅಲಂಕರಿಸಿದ ತೆರೆದ ವಾಹನದ ಮೆರವಣಿಗೆ ತಾಲೂಕು ಆಡಳಿತ ಸೌಧದಿಂದ ಆರಂಭಗೊಂಡು ಹಳೆ ಬಸ್ ನಿಲ್ದಾಣ, ಗಾರ್ಡನ್ ಸರ್ಕಲ್ ಹಾಗೂ ಚಂದ್ರಗುತ್ತಿ ಸರ್ಕಲ್ ಮೂಲಕ ಸಾಗಿತು. ಬಳಿಕ ಬಾಲಭವನದಲ್ಲಿ ಮೆರವಣಿಗೆ ಸಮಾಪ್ತಿಗೊಂಡಿತು.
