ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

State-National

ಹೋಟೆಲ್ ಎದುರೇ ಗುಂಡಿನ ದಾಳಿ!

Pakka News Web • 29 ಆಗಸ್ಟ್ 2026,

ಪಣಜಿ: ಗೋವಾದಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಕ್ ಅವರ ಮೇಲೆ ತಡರಾತ್ರಿ ನಡೆದ ಗುಂಡಿನ ದಾಳಿ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾದ ಶ್ರೀನಿವಾಸ್ ನಾಯಕ್ ಅವರು ಈ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದು, ಅವರೊಂದಿಗೆ ಇದ್ದ ಭದ್ರತಾ ಸಿಬ್ಬಂದಿಗೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕ್ಯಾಸಿನೋ ಪ್ರೈಡ್ ಹಾಗೂ ಮೆಜೆಸ್ಟಿಕ್ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿರುವ ಶ್ರೀನಿವಾಸ್ ಅವರು ಶುಕ್ರವಾರ ರಾತ್ರಿ ಪಣಜಿ ಸಮೀಪದ ಪೊರ್ವೊರಿಂನಲ್ಲಿರುವ ಹೋಟೆಲ್ ಮೆಜೆಸ್ಟಿಕ್‌ನಿಂದ ಹೊರಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶ್ರೀನಿವಾಸ್

ಹೋಟೆಲ್ ಸಮೀಪ ಮೊದಲೇ ಹೊಂಚು ಹಾಕಿ ಕಾದಿದ್ದ ಇಬ್ಬರು ಅಪರಿಚಿತರು ಏಕಾಏಕಿ ನಾಯ್ಕ್ ಅವರತ್ತ ಗುಂಡು ಹಾರಿಸಿದ್ದಾರೆ. ಗುಂಡುಗಳು ಗುರಿ ತಪ್ಪಿದ ಪರಿಣಾಮ ನಾಯ್ಕ್ ಹಾಗೂ ಅವರ ಭದ್ರತಾ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ದಾಳಿಯ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಕೆಲಕಾಲ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಘಟನೆಯ ದೃಶ್ಯಾವಳಿಗಳು ಹೋಟೆಲ್ ಆವರಣದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಮಾಹಿತಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ದಾಳಿಯ ಹಿಂದಿನ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉದ್ಯಮ ಸಂಬಂಧಿತ ವೈಷಮ್ಯ, ವೈಯಕ್ತಿಕ ದ್ವೇಷ ಅಥವಾ ಇತರೆ ಕಾರಣಗಳ ಹಿನ್ನೆಲೆಯಲ್ಲಿ ದಾಳಿ ನಡೆದಿರಬಹುದೇ ಎಂಬ ವಿವಿಧ ಆಯಾಮಗಳಲ್ಲಿ ಗೋವಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250