ಕಾರವಾರ: ಉತ್ತರ ಕನ್ನಡದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಮೂಡಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ಹೆಸರನ್ನು ಇದೀಗ ಕಾರವಾರದ ವೈದ್ಯಕೀಯ ಕಾಲೇಜಿನೊಂದಿಗೆ ಶಾಶ್ವತವಾಗಿ ಜೋಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಕಾರವಾರ ವೈದ್ಯಕೀಯ ಕಾಲೇಜಿಗೆ ರಾಮಕೃಷ್ಣ ಹೆಗಡೆಯವರ ಹೆಸರಿಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ರಾಮಕೃಷ್ಣ ಹೆಗಡೆಯವರ ಜನ್ಮಶತಮಾನೋತ್ಸವದ ವೇದಿಕೆಯಿಂದ ಹೊರಬಿದ್ದ ಈ ಘೋಷಣೆ ಉತ್ತರ ಕನ್ನಡ ಜಿಲ್ಲೆಗೆ ವಿಶೇಷ ಸಂದೇಶ ನೀಡಿದೆ. ತಮ್ಮ ರಾಜಕೀಯ ಬದುಕಿನ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರಿದ ಹೆಗಡೆಯವರ ಸ್ಮರಣೆಯನ್ನು ಕೇವಲ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಶಾಶ್ವತವಾಗಿ ಉಳಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂಬುದನ್ನು ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ಮಾತನಾಡಿದ ಶಿವಕುಮಾರ್, ಹೆಗಡೆಯವರ ಹೆಸರಿನಲ್ಲಿ ಕಾರವಾರ ವೈದ್ಯಕೀಯ ಕಾಲೇಜು ಮಾತ್ರವಲ್ಲದೆ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಯೊಂದಕ್ಕೂ ಅವರ ಹೆಸರಿಡಲಾಗುವುದು ಎಂದು ಪ್ರಕಟಿಸಿದರು.
ಗ್ರಾಮೀಣ ಭಾರತದ ಆಡಳಿತ ವ್ಯವಸ್ಥೆಗೆ ಹೊಸ ಚೈತನ್ಯ ನೀಡಿದ ನಾಯಕರಲ್ಲಿ ರಾಮಕೃಷ್ಣ ಹೆಗಡೆ ಪ್ರಮುಖರು ಎಂದು ಸ್ಮರಿಸಿದ ಮುಖ್ಯಮಂತ್ರಿ, ಅವರ ಪಂಚಾಯತ್ ರಾಜ್ ಚಿಂತನೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಪಂಚಾಯಿತಿಗೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದರು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯೊಂದಿಗೆ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ರಾಮಕೃಷ್ಣ ಹೆಗಡೆಯವರು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ, ಹೊಸ ನಾಯಕತ್ವವನ್ನು ರೂಪಿಸಿದ ನಾಯಕರು ಎಂದು ಶಿವಕುಮಾರ್ ಬಣ್ಣಿಸಿದರು. ಪಂಚಾಯಿತಿಯಿಂದ ಹಿಡಿದು ವಿಧಾನಸಭೆ, ಸಂಸತ್ತಿನವರೆಗೆ ಅನೇಕ ನಾಯಕರ ರಾಜಕೀಯ ಬೆಳವಣಿಗೆಯಲ್ಲಿ ಹೆಗಡೆಯವರ ಪ್ರಭಾವವಿತ್ತು. ಅವರ ರಾಜಕೀಯ ಶಾಲೆಯಲ್ಲಿ ಬೆಳೆದ ಅನೇಕರು ಇಂದು ಬೇರೆ ಬೇರೆ ಪಕ್ಷಗಳಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಅವರ ನಾಯಕತ್ವದ ವ್ಯಾಪ್ತಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಜಾತಿ ಮತ್ತು ವ್ಯಕ್ತಿಕೇಂದ್ರಿತ ರಾಜಕಾರಣಕ್ಕಿಂತ ಮೌಲ್ಯ, ಸಾಮಾಜಿಕ ನ್ಯಾಯ ಮತ್ತು ಜನಸೇವೆಗೆ ಹೆಗಡೆಯವರು ಹೆಚ್ಚಿನ ಮಹತ್ವ ನೀಡಿದ್ದರು ಎಂದು ಶಿವಕುಮಾರ್ ಸ್ಮರಿಸಿದರು. ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಅವರು ವಹಿಸಿದ ಪಾತ್ರ ದೇಶದ ಗಮನ ಸೆಳೆದಿತ್ತು ಎಂದರು.
ಶಿಕ್ಷಣ ಕ್ಷೇತ್ರದಲ್ಲಿಯೂ ಕರ್ನಾಟಕದ ಮುಂದಿನ ಬೆಳವಣಿಗೆಗೆ ಹೆಗಡೆಯವರ ಅವಧಿಯ ನೀತಿಗಳು ಪೂರಕವಾಗಿದ್ದವು ಎಂದು ಮುಖ್ಯಮಂತ್ರಿ ಹೇಳಿದರು. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣದ ವಿಸ್ತರಣೆಗೆ ಆಗ ತೆಗೆದುಕೊಂಡ ಕ್ರಮಗಳು ಮುಂದಿನ ದಿನಗಳಲ್ಲಿ ರಾಜ್ಯವನ್ನು ಶಿಕ್ಷಣ ಕ್ಷೇತ್ರದ ಪ್ರಮುಖ ಕೇಂದ್ರವನ್ನಾಗಿಸಲು ನೆರವಾದವು ಎಂದು ಅವರು ಅಭಿಪ್ರಾಯಪಟ್ಟರು.
ರಾಮಕೃಷ್ಣ ಹೆಗಡೆ ಅವರಿಗೆ ದೇಶದ ಪ್ರಧಾನಿಯಾಗುವ ಸಾಮರ್ಥ್ಯವಿತ್ತು ಎಂದು ಹೇಳಿದ ಶಿವಕುಮಾರ್, ರಾಜಕೀಯವಾಗಿ ಅವರ ದೂರದೃಷ್ಟಿ ಮತ್ತು ಆಡಳಿತ ವೈಖರಿ ಇತರ ನಾಯಕರಿಗಿಂತ ವಿಭಿನ್ನವಾಗಿತ್ತು ಎಂದು ಸ್ಮರಿಸಿದರು.
ಈ ಎಲ್ಲ ಬೆಳವಣಿಗೆಗಳ ನಡುವೆ ಕಾರವಾರ ವೈದ್ಯಕೀಯ ಕಾಲೇಜಿಗೆ ರಾಮಕೃಷ್ಣ ಹೆಗಡೆಯವರ ಹೆಸರಿಡುವ ಘೋಷಣೆಯೇ ಉತ್ತರ ಕನ್ನಡಕ್ಕೆ ದೊರೆತ ಪ್ರಮುಖ ಘೋಷಣೆಯಾಗಿ ಹೊರಹೊಮ್ಮಿದೆ. ಜಿಲ್ಲೆಯ ನೆಲದಿಂದ ರಾಜ್ಯದ ಮುಖ್ಯಮಂತ್ರಿವರೆಗೆ ಏರಿದ ರಾಮಕೃಷ್ಣ ಹೆಗಡೆಯವರ ಹೆಸರನ್ನು ಕಾರವಾರದ ಪ್ರಮುಖ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಯೊಂದಿಗೆ ಜೋಡಿಸುವ ಮೂಲಕ ಅವರ ನೆನಪನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
