ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Uttara-Kannada

ಕಸ್ತೂರಿರಂಗನ್ ವರದಿ: ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯದಿಂದ ಹೊರಗಿಡಲು ಆಗ್ರಹ

Pakka News Web • 30 ಆಗಸ್ಟ್ 2026,

ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ (ESZ) ಗುರುತಿಸುವಿಕೆ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿರಬೇಕು ಎಂದು ಅರಣ್ಯಭೂಮಿ ಹಕ್ಕು ಹೋರಾಟ ಸಂಘಟನೆಗಳ ರಾಜ್ಯ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಪ್ರತಿಪಾದಿಸಿದ್ದಾರೆ.

ಜನವಸತಿ ಪ್ರದೇಶಗಳನ್ನು ಈ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರತುಪಡಿಸಬೇಕು ಹಾಗೂ ಪರಿಸರ ಸೂಕ್ಷ್ಮ ವಲಯಗಳಲ್ಲಿ ಯಾವುದೇ ಬೃಹತ್ ಯೋಜನೆಗಳಿಗೆ ಅನುಮತಿ ನೀಡುವ ವಿವೇಚನಾಧಿಕಾರ ಸರ್ಕಾರಗಳಿಗೆ ಇರಲೇಬಾರದು ಎಂದು ಅವರು ಆಗ್ರಹಿಸಿದ್ದಾರೆ.

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ವಿಧಿಸುವ ಕುರಿತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27ರಂದು ಹೊರಡಿಸಿದ ಕರಡು ಅಧಿಸೂಚನೆಗೆ ಆಕ್ಷೇಪ ವ್ಯಕ್ತಪಡಿಸಿ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದಾರೆ. ಕರಡು ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವ್ಯಾಪ್ತಿಗೆ ತರಲಾಗಿದೆ. ಆದರೆ, ಸೂಕ್ಷ್ಮ ಪರಿಸರದಲ್ಲಿ ಪಂಪ್ಡ್ ಸ್ಟೋರೇಜ್, ನದಿ ತಿರುವು ಹಾಗೂ ಅಣು ವಿದ್ಯುತ್‌ನಂತಹ ಬೃಹತ್ ಯೋಜನೆಗಳಿಗೆ ಅನುಮತಿ ನೀಡುವ ವಿವೇಚನಾಧಿಕಾರವನ್ನು ಕೇಂದ್ರ ಸರ್ಕಾರ ಉಳಿಸಿಕೊಳ್ಳಲು ಯತ್ನಿಸುತ್ತಿರುವುದು ಸರಿಯಲ್ಲ. ಯೋಜನೆಗಳಿಗೆ ಇಲ್ಲದ ನಿರ್ಬಂಧ ಜನಸಾಮಾನ್ಯರ ಬದುಕಿಗೇಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವಲ್ಲಿ ಕೇರಳ ರಾಜ್ಯಕ್ಕೆ ಹಲವು ವಿನಾಯಿತಿಗಳನ್ನು ನೀಡಲಾಗಿದ್ದು, ಕರ್ನಾಟಕಕ್ಕೆ ಪ್ರತ್ಯೇಕ ಮಾನದಂಡ ಅನುಸರಿಸಲಾಗಿದೆ. ಭೌಗೋಳಿಕವಾಗಿ ಕೇರಳ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚಿನ ಸಾಮ್ಯತೆ ಇರುವುದರಿಂದ, ಕೇರಳ ಮಾದರಿಯಲ್ಲೇ ಜನವಸತಿಗಳನ್ನು ಹೊರತುಪಡಿಸಿ ವೈಜ್ಞಾನಿಕವಾಗಿ ವಲಯ ಗುರುತಿಸಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಗಮನ ಸೆಳೆಯಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸುಮಾರು 350ಕ್ಕೂ ಹೆಚ್ಚು ಜನವಸತಿ ಪ್ರದೇಶಗಳು ಸೇರಿದಂತೆ ಒಟ್ಟು 567 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗಿದ್ದು, ಇದು ಯಥಾವತ್ ಜಾರಿಯಾದರೆ ಸ್ಥಳೀಯರ ಜನಜೀವನಕ್ಕೆ ಮಾರಕವಾಗಲಿದೆ. ಜಿಲ್ಲೆಯ ಶೇ. 80ರಷ್ಟು ವಿಸ್ತೀರ್ಣ ಅರಣ್ಯ ಭೂಮಿಯಾಗಿದ್ದು, ಕೇವಲ ಶೇ. 20ರಷ್ಟು ಮಾತ್ರ ಖಾಸಗಿ ಮತ್ತು ಕಂದಾಯ ಭೂಮಿಯಾಗಿದೆ. ಇಲ್ಲಿನ ಶೇ. 30ರಷ್ಟು ಜನರು ತಲೆತಲಾಂತರಗಳಿಂದ ಅರಣ್ಯ ಭೂಮಿಯಲ್ಲೇ ಕೃಷಿ ಮತ್ತು ತೋಟಗಾರಿಕೆ ಅವಲಂಬಿಸಿ ಬದುಕುತ್ತಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮಗಳೇ ಜನರ ಉಸಿರುಗಟ್ಟಿಸುತ್ತಿರುವಾಗ, ಇಡೀ ಜನವಸತಿ ಪ್ರದೇಶಗಳಿಗೆ ಹೊಸ ನಿರ್ಬಂಧ ಹೇರುವುದು ಸರಿಯಲ್ಲ.

ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣ ತಿರಸ್ಕರಿಸುವ ಬದಲಿಗೆ, ಕೇರಳ ಮಾದರಿಯಲ್ಲಿ ಜನವಸತಿಗಳನ್ನು ಕೈಬಿಟ್ಟು ನೈಜ ಸೂಕ್ಷ್ಮ ಪರಿಸರವನ್ನು ಸಂರಕ್ಷಿಸುವ ಹಾಗೂ ಜನಹಿತ ಕಾಯುವ ನಿಲುವನ್ನು ರಾಜ್ಯ ಸರ್ಕಾರ ತಳೆಯಬೇಕು. ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ತನ್ನ ಕರಡು ಅಧಿಸೂಚನೆಯನ್ನು ಕೂಡಲೇ ಹಿಂಪಡೆಯುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಚಂದ್ರಕಾಂತ ಕೊಚರೇಕರ ಒತ್ತಾಯಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250