ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ವಸಂತರಾಯ ಗಾಂವಕರ್ ಆಯ್ಕೆ

Pakka News Web • 3 ಸೆಪ್ಟೆಂ 2026,

ಭಟ್ಕಳ:ಹೊನ್ನಾವರ ತಾಲೂಕಿನ ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವಸಂತರಾಯ ವೆಂಕಟ್ರಮಣ ಗಾಂವಕರ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರ ಘಟಕ ನೀಡುವ ಮಾಜಿ ಪ್ರಧಾನಿ ರಾಜೀವ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೆ.5ರಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ‘ಭಾರತ್ ಜೋಡೋ ಭವನ’ದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ತಿಳಿಸಿದ್ದಾರೆ.

ವಸಂತರಾಯ ಗಾಂವಕರ್ ಅವರು 1993ರ ಸೆ.8ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾಗಿದ್ದರು. 1997ರಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.98ರ ಫಲಿತಾಂಶ ದಾಖಲಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2000ರಿಂದ 2003ರವರೆಗೆ ಇದೇ ಕಾಲೇಜಿನಲ್ಲಿ ಪ್ರಭಾರಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದರು.

2003ರಲ್ಲಿ ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಿಡ್ಕಲ್ ಕಟ್ಟೆಗೆ ವರ್ಗಾವಣೆಯಾಗಿ ನಾಲ್ಕು ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, 2007ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಭಟ್ಕಳಕ್ಕೆ ವರ್ಗಾವಣೆಯಾದರು. 2007ರಿಂದ 2020ರವರೆಗೆ ಸುಮಾರು ಆರು ವರ್ಷಗಳ ಕಾಲ ಪ್ರಭಾರಿ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿದರು. 2020ರಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರ್ಸಾಕ್ಕೆ ಪ್ರಾಚಾರ್ಯರಾಗಿ ಪದೋನ್ನತಿ ಹೊಂದಿ, ಬಳಿಕ ಮಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಕೆಪಿಎಸ್)ನಲ್ಲಿ ಪ್ರಸ್ತುತ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಣದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಚಟುವಟಿಕೆಗಳಲ್ಲೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಉಪನ್ಯಾಸಕರಾಗಿದ್ದ ಸಂದರ್ಭದಲ್ಲಿ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ವಿಶೇಷ ವಾರ್ಷಿಕ ಶಿಬಿರಗಳಲ್ಲಿ ತರಬೇತಿದಾರರಾಗಿ ಭಾಗವಹಿಸಿದ್ದಾರೆ. ಪ್ರಾಚಾರ್ಯರಾಗಿ ಸುಮಾರು ಎಂಟು ವಿಶೇಷ ವಾರ್ಷಿಕ ಶಿಬಿರಗಳನ್ನು ಆಯೋಜಿಸಿ ಎನ್‌ಎಸ್‌ಎಸ್ ಘಟಕದ ಚಟುವಟಿಕೆಗಳಿಗೆ ಉತ್ತೇಜನ ನೀಡಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲೂ ಗಾಂವಕರ್ ಅವರದ್ದು ಸಕ್ರಿಯ ಸೇವೆಯಾಗಿದೆ. ಬಾಲ್ಯದಿಂದಲೇ ಯಕ್ಷಗಾನ ತರಬೇತಿ ಪಡೆದು ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಅವರು, 1997ರಿಂದ 2003ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಶ್ರೀ ಗಣೇಶ ಯಕ್ಷಗಾನ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಯಕ್ಷಗಾನ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. 2003ರಲ್ಲಿ ಶ್ರೀ ಗಣೇಶ ಯಕ್ಷಗಾನ ಮಂಡಳಿಯಿಂದ ಸನ್ಮಾನಿತರಾಗಿದ್ದ ಅವರು, 2013ರಲ್ಲಿ ಯಕ್ಷಗಾನ ಸೇವೆಗಾಗಿ ಭಟ್ಕಳ ತಾಲೂಕು ಆಡಳಿತದಿಂದ ಗಣರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದರು.

ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ ಯಕ್ಷಗಾನದಲ್ಲಿ ವಿಷ್ಣು, ಕೃಷ್ಣ, ಈಶ್ವರ, ಬಬ್ರುವಾಹನ, ಸುಧನ್ವ, ಅಭಿಮನ್ಯು, ಮನ್ಮಥ, ಧರ್ಮಾಂಗದ ಹಾಗೂ ಲವಕುಶ ಸೇರಿದಂತೆ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ.

ವ್ಯಕ್ತಿತ್ವ ವಿಕಸನ ಸಂಸ್ಥೆ ಜೆಸಿಐನಲ್ಲೂ 1995ರಿಂದ ಸೇವೆ ಸಲ್ಲಿಸುತ್ತಿರುವ ಅವರು, 1998ರಲ್ಲಿ ದಕ್ಷಿಣ ಕನ್ನಡದ ಕಡಬ ಕದಂಬ ಜ್ಯೂನಿಯರ್ ಚೇಂಬರ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲಿ ವಲಯ ಮಟ್ಟದ ಉತ್ತಮ ಅಧ್ಯಕ್ಷ ಪ್ರಶಸ್ತಿಗೂ ಪಾತ್ರರಾಗಿದ್ದರು. ಶಿಕ್ಷಣ, ಎನ್‌ಎಸ್‌ಎಸ್, ಯಕ್ಷಗಾನ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಅವರ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250