ಸಿದ್ಧಾಪುರ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಹಾಳದಕಟ್ಟಾದ ಪಿ.ಎಂ. ಶ್ರೀ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದೋನ್ನತ ಮುಖ್ಯ ಶಿಕ್ಷಕಿ ಶಾರದಾ ಪರಮೇಶ್ವರ ರಾವ್ ಅವರಿಗೆ 2026–27ನೇ ಸಾಲಿನ ಪ್ರತಿಷ್ಠಿತ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಉತ್ತಮ ಶಿಕ್ಷಕಿ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.), ಬೆಂಗಳೂರು ಇದರ ಸಿದ್ಧಾಪುರ ತಾಲೂಕು ಶಾಖೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ತಾಲೂಕಿನ ಆಯ್ದ ಸಾಧಕ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಶಾರದಾ ಪರಮೇಶ್ವರ ರಾವ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಿದ್ಧಾಪುರದ ಶಂಕರ್ ಮಠದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಶಿಕ್ಷಕಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಾರದಾ ಪರಮೇಶ್ವರ ರಾವ್ ಅವರು ಪ್ರಸ್ತುತ ಹಾಳದಕಟ್ಟಾದ ಪಿ.ಎಂ. ಶ್ರೀ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಾಲೆಯ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಅವರು ನೀಡುತ್ತಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಇದಲ್ಲದೆ, 2024–25ನೇ ಸಾಲಿನಲ್ಲಿ ಶಾರದಾ ಪರಮೇಶ್ವರ ರಾವ್ ಅವರಿಗೆ ‘ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ’ ಕೂಡ ಲಭಿಸಿದ್ದು, ಅವರ ಶೈಕ್ಷಣಿಕ ಸೇವೆಗೆ ಮತ್ತೊಂದು ಪ್ರಮುಖ ಗೌರವ ದೊರೆತಂತಾಗಿದೆ.
ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಿದ್ಧಾಪುರ ತಾಲೂಕು ಅಧ್ಯಕ್ಷ ಎಂ.ಕೆ. ನಾಯ್ಕ ಕಡಕೇರಿ, ಪ್ರಧಾನ ಕಾರ್ಯದರ್ಶಿ ಜಿ.ಜಿ. ಹೆಗಡೆ, ಸಿದ್ಧಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಪ್ಪ ಜಿ.ಎಂ. ಸೇರಿದಂತೆ ಸಂಘದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದು, ಶಾರದಾ ಪರಮೇಶ್ವರ ರಾವ್ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.
