ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಪೊಲೀಸ್ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆಗೆ 367 ಅಭ್ಯರ್ಥಿಗಳು ಗೈರು

Pakka News Web • 6 ಸೆಪ್ಟೆಂ 2026,

ಕಾರವಾರ: ಜಿಲ್ಲೆಯಲ್ಲಿ ರವಿವಾರ ನಡೆದ ಸಿಎಆರ್/ಡಿಎಆರ್ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಬರೋಬ್ಬರಿ 367 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ. 

ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿ ಒಟ್ಟು 1,309 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತಾದರೂ, ಅವರಲ್ಲಿ ಕೇವಲ 942 ಮಂದಿ ಮಾತ್ರ ಹಾಜರಾಗಿದ್ದು, ಉಳಿದ 367 ಮಂದಿ ಪರೀಕ್ಷೆಯಿಂದ ದೂರ ಉಳಿದಿದ್ದಾರೆ.

ಕೇಂದ್ರವಾರು ಅಂಕಿಅಂಶಗಳನ್ನು ಗಮನಿಸಿದರೆ, ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ (ಸ್ವಾಯತ್ತ) ಕಾಲೇಜು ಕೇಂದ್ರದಲ್ಲಿ ಗರಿಷ್ಠ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ಚಕ್ಕರ್ ಹಾಕಿದ್ದಾರೆ. ಇಲ್ಲಿ ನಿಗದಿಯಾಗಿದ್ದ 328 ಅಭ್ಯರ್ಥಿಗಳಲ್ಲಿ 221 ಮಂದಿ ಪರೀಕ್ಷೆ ಎದುರಿಸಿದರೆ, ಬರೋಬ್ಬರಿ 107 ಮಂದಿ ಗೈರಾಗಿದ್ದಾರೆ.

ಉಳಿದಂತೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಕೇಂದ್ರದಲ್ಲಿ 327 ಅಭ್ಯರ್ಥಿಗಳಲ್ಲಿ 90 ಮಂದಿ, ಮಾಜಾಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 327 ಅಭ್ಯರ್ಥಿಗಳಲ್ಲಿ 87 ಮಂದಿ ಹಾಗೂ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ 327 ಅಭ್ಯರ್ಥಿಗಳಲ್ಲಿ 83 ಮಂದಿ ಪರೀಕ್ಷೆಗೆ ಹಾಜರಾಗಿಲ್ಲ.

ಉಳಿದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 244, ಪಾಲಿಟೆಕ್ನಿಕ್ ಕಾಲೇಜಿನಲ್ಲಿ 237 ಹಾಗೂ ಮಾಜಾಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 240 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಗೈರುಹಾಜರಿಯ ಪ್ರಮಾಣ ಗಮನಾರ್ಹವಾಗಿದ್ದರೂ, ಜಿಲ್ಲೆಯ ಎಲ್ಲಾ ನಾಲ್ಕೂ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಲಿಖಿತ ಪರೀಕ್ಷಾ ಪ್ರಕ್ರಿಯೆಯು ಸಂಪೂರ್ಣ ಶಾಂತಿಯುತ ಹಾಗೂ ಸುಗಮವಾಗಿ ಮುಕ್ತಾಯಗೊಂಡಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250