ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Uttara-Kannada

ಕಸ್ತೂರಿ ರಂಗನ್ ವರದಿ ರದ್ದತಿಗೆ ಆಗ್ರಹ: ರೈತ ಸಂಘದಿಂದ ಪ್ರತಿಭಟನೆ

Pakka News Web • 7 ಸೆಪ್ಟೆಂ 2026,

ಅಂಕೋಲಾ: ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ಹಿಂಪಡೆಯಬೇಕು ಹಾಗೂ ಅರಣ್ಯವಾಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ವರದಿ ವಿರೋಧಿಸಿ ಹೋರಾಟಗಳು ತೀವ್ರಗೊಂಡಿದ್ದು, ಅದರ ಅಂಗವಾಗಿ ಅಂಕೋಲಾ ತಾಲೂಕಿನ ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ ರೈತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದ ಎದುರಿನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಾಗಿ ತಹಶೀಲ್ದಾರ್ ಕಚೇರಿಯನ್ನು ತಲುಪಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಹಾಗೂ ಕರಾವಳಿ ಭಾಗದ ರೈತರು, ಅರಣ್ಯವಾಸಿಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ. ಕೂಡಲೇ ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು ಈ ವರದಿಯ ಬಗ್ಗೆ ಸಮಗ್ರ ಚರ್ಚೆ ನಡೆಸಿ, ಕೇಂದ್ರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವ ಮೂಲಕ ರೈತರ ಪರ ನಿಲ್ಲಬೇಕು ಎಂದು ಒತ್ತಾಯಿಸಿದರು.

ಬಳಿಕ ಮುಖ್ಯಮಂತ್ರಿಗಳಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಅನುಪಮಾ ನಾಯ್ಕ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಗೌರೀಶ ನಾಯಕ, ಕಾರ್ಯದರ್ಶಿ ಸಂತೋಷ ನಾಯ್ಕ, ಪದಾಧಿಕಾರಿಗಳಾದ ಉದಯ ನಾಯ್ಕ ಹೊಸಗದ್ದೆ, ವೆಂಕಟರಮಣ ಗೌಡ, ಮಾದೇವ ಗೌಡ, ಮೀನಾಕ್ಷಿ ಗೌಡ, ಗುರು ನಾಯ್ಕ ಅಗಸೂರ ಹಾಗೂ ಸಂದೀಪ್ ನಾಯ್ಕ ಸುಂಕಸಾಳ ವಹಿಸಿದ್ದರು.

ಹೋರಾಟದಲ್ಲಿ ಪ್ರಮುಖರಾದ ನಾಗರಾಜ ಹೆಗಡೆ ಕೊಡ್ಲಗದ್ದೆ, ಬಾಲಚಂದ್ರ ಶೆಟ್ಟಿ, ರಮಾನಂದ ಅಚವೆ, ಜ್ಯೋತಿ ನಾಯ್ಕ, ವಿಠ್ಠಲ ಗೌಡ, ಕೇಶವ ನಾಯಕ, ಚಂದ್ರು ಗೌಡ ಶಿರಗುಂಜಿ, ಶಿವರಾಮ ಪಟಗಾರ ಬ್ರಹ್ಮೂರು ಸೇರಿದಂತೆ ನೂರಾರು ರೈತರು ಹಾಗೂ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250