ಕಾರವಾರ: ಮಲ್ಲಾಪುರದಲ್ಲಿ ಬಿಡಾಡಿ ಹೋರಿಗಳ ಹಾವಳಿ ಮತ್ತೊಮ್ಮೆ ಆತಂಕ ಸೃಷ್ಟಿಸಿದ್ದು, ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60 ವರ್ಷದ ವ್ಯಕ್ತಿ ಮೇಲೆ ಹೋರಿ ಗುದ್ದಿದ ಕಾರಣ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೆಲವೇ ದಿನಗಳ ಹಿಂದೆ ಇದೇ ಕುಟುಂಬದ ಸೊಸೆ ಹೋರಿ ದಾಳಿಗೆ ಬಲಿಯಾಗಿದ್ದ ಬೆನ್ನಲ್ಲೇ, ಇದೀಗ ಮನೆಯ ಹಿರಿಯರ ಮೇಲೂ ದಾಳಿ ನಡೆದಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಮಲ್ಲಾಪುರ ಕುಚೇಗಾರ ಗೋಪಾಲನಗರದ ಡುಮಿಂಗ್ ಎಫ್. ರೋಡ್ರಿಸ್ (60) ಗಾಯಗೊಂಡವರು. ಮೀನು ಹಿಡಿದು ಮಾರಾಟ ಮುಗಿಸಿ, ಗೋವಾದಲ್ಲಿದ್ದ ಸಂಬಂಧಿಕರೊಬ್ಬರ ನಿಧನದ ಸುದ್ದಿ ತಿಳಿದು ಮಗನ ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಈ ವೇಳೆ ಮಲ್ಲಾಪುರ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಹೋರಿಗಳ ಹಿಂಡು ಏಕಾಏಕಿ ಸ್ಕೂಟರ್‌ಗೆ ಅಡ್ಡಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ಮಗ ಇಬ್ಬರೂ ರಸ್ತೆಗೆ ಬಿದ್ದಿದ್ದು, ನೆಲಕ್ಕುರುಳಿದ ಡುಮಿಂಗ್ ಅವರ ಮೇಲೆ ಹೋರಿಯೊಂದು ಗುದ್ದಿದೆ.
ತಲೆ, ಕೈ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಕೂಡಲೇ ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆ ಕುಟುಂಬದ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವೇ ದಿನಗಳ ಹಿಂದೆ ಡುಮಿಂಗ್ ಅವರ ಸೊಸೆ ರಾಜೇಶ್ವರಿ ಪೆಟ್ರಿಕ್ (29) ಇದೇ ಮಲ್ಲಾಪುರದಲ್ಲಿ ಬಿಡಾಡಿ ಹೋರಿಯ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಆ ಸಾವಿನ ಆಘಾತದಿಂದ ಕುಟುಂಬ ಇನ್ನೂ ಹೊರಬರುವ ಮುನ್ನವೇ ಮತ್ತೊಂದು ದಾಳಿ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.
ಬಿಡಾಡಿ ದನಗಳ ಹಾವಳಿ ನಿಯಂತ್ರಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಸಂಬಂಧಪಟ್ಟವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡುತ್ತಿರುವ ಹೋರಿಗಳನ್ನು ತಕ್ಷಣ ನಿಯಂತ್ರಿಸಬೇಕು, ಮೃತಪಟ್ಟ ರಾಜೇಶ್ವರಿ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಗಾಯಗೊಂಡ ಡುಮಿಂಗ್ ಅವರ ಚಿಕಿತ್ಸಾ ವೆಚ್ಚವನ್ನು ಭರಿಸಬೇಕು ಎಂದು ಒತ್ತಾಯಿಸಿದ್ದಾರೆ.
