ಸೆಪ್ಟೆಂಬರ್ 11, 2026
ಶುಕ್ರವಾರ

ನಮ್ಮನ್ನು ಅನುಸರಿಸಿ

Uttara-Kannada

ಅಲಿಗದ್ದಾ ಕಡಲತೀರ ಹಾಗೂ ಚರಂಡಿ ಸ್ವಚ್ಛತೆಗೆ ಆಗ್ರಹ: ವಿಲ್ಸನ್ ಫರ್ನಾಂಡಿಸ್ ಎಚ್ಚರಿಕೆ

Pakka News Web • 10 ಸೆಪ್ಟೆಂ 2026,

ಕಾರವಾರ: ನಗರದ ಸಮೀಪವಿರುವ ಬೈತಖೋಲ್ ಗ್ರಾಮದ ಅಲಿಗದ್ದಾ ಕಡಲತೀರದಲ್ಲಿ ಬೆಳೆದಿರುವ ಅಪಾಯಕಾರಿ ಮರ-ಗಿಡಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು ಹಾಗೂ ಗ್ರಾಮದ ಚರಂಡಿಗಳನ್ನು ದುರಸ್ತಿಪಡಿಸಬೇಕು ಎಂದು ಸಮಾಜ ಸೇವಕ ವಿಲ್ಸನ್ ಫರ್ನಾಂಡಿಸ್ ನಗರಸಭೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ವಿಶ್ವಕವಿ ರವೀಂದ್ರನಾಥ ಠಾಕೂರರು ಕಾರವಾರದ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗಿ ಕೊಂಡಾಡಿದ್ದ ಈ ಕಡಲನಗರಿಯು ದೇಶ-ವಿದೇಶಗಳ ಪ್ರವಾಸಿಗರ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಆದರೆ, ಇಂತಹ ಪ್ರಸಿದ್ಧ ತಾಣದ ಪಕ್ಕದಲ್ಲೇ ಇರುವ ಅಲಿಗದ್ದಾ ಕಡಲತೀರವು ಕಳೆದ ಎರಡು ವರ್ಷಗಳಿಂದ ಯಾವುದೇ ನಿರ್ವಹಣೆಯಿಲ್ಲದೆ ಸಂಪೂರ್ಣ ಅವ್ಯವಸ್ಥೆಯ ಗೂಡಾಗಿದೆ.

ಕಡಲತೀರ ಹಾಗೂ ರಸ್ತೆಬದಿಯಲ್ಲಿ ಬೃಹತ್ ಗಾತ್ರದ ಮರಗಳು ಮತ್ತು ಮುಳ್ಳಿನ ಪೊದೆಗಳು ಬೆಳೆದು ನಿಂತಿರುವುದರಿಂದ ವಾಹನ ಸವಾರರಿಗೆ ಎದುರಿನಿಂದ ಬರುವ ವಾಹನಗಳು ಕಾಣದೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿವೆ. ಇದರಿಂದಾಗಿ ಶಾಲೆ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಪಾದಚಾರಿಗಳು ಜೀವಭಯದಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.

ಮುಂಬರುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಅಲಿಗದ್ದಾ ಕಡಲತೀರದಲ್ಲಿ ಶ್ರೀ ಗಣೇಶ ಮೂರ್ತಿಗಳ ವಿಸರ್ಜನೆ ನೆರವೇರಲಿದ್ದು, ಸಾವಿರಾರು ಭಕ್ತರು ಇಲ್ಲಿ ಸೇರಲಿದ್ದಾರೆ. ಆದರೆ ಪ್ರಸ್ತುತ ಕಡಲತೀರದಲ್ಲಿ ಮುಳ್ಳಿನ ಕಂಟಿಗಳು ತುಂಬಿಕೊಂಡಿರುವುದು ಮಾತ್ರವಲ್ಲದೆ, ಗ್ರಾಮದ ಚರಂಡಿಗಳು ಕಸ-ಕಡ್ಡಿಗಳಿಂದ ಮುಚ್ಚಿಹೋಗಿ ಶಿಥಿಲಗೊಂಡಿವೆ. ಇದರಿಂದಾಗಿ ಪರಿಸರದಲ್ಲಿ ದುರ್ನಾತ ಬೀರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಆಡಳಿತ ಮಂಡಳಿಯು ತಕ್ಷಣವೇ ಯುದ್ಧೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಕಡಲತೀರದ ಮುಳ್ಳಿನ ಪೊದೆಗಳನ್ನು ತೆರವುಗೊಳಿಸಿ, ಚರಂಡಿಗಳಲ್ಲಿ ಹೂಳು ತೆಗೆದು ನೈರ್ಮಲ್ಯ ಕಾಪಾಡದಿದ್ದರೆ ಗ್ರಾಮಸ್ಥರನ್ನು ಒಗ್ಗೂಡಿಸಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಿಲ್ಸನ್ ಫರ್ನಾಂಡಿಸ್ ಎಚ್ಚರಿಕೆ ನೀಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250