ಭಟ್ಕಳ: ತಾವು ಯಾವುದೇ ಸಾಲ ಪಡೆದಿಲ್ಲದಿದ್ದರೂ ₹3 ಲಕ್ಷ ಕೈಗಡ ಸಾಲ ಪಡೆದಿರುವುದಾಗಿ ಆರೋಪಿಸಿ ವಕೀಲರ ಮೂಲಕ ಕಾನೂನು ನೋಟಿಸ್ ಕಳುಹಿಸಲಾಗಿದೆ. ಈ ಮೂಲಕ ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಹಾಗೂ ಮಾನಹಾನಿ ಮಾಡಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಿ ಭಟ್ಕಳದ ಗುತ್ತಿಗೆದಾರರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಭಟ್ಕಳದ ಹಿಂದೂ ಕಾಲೋನಿ ನಿವಾಸಿ, ಗುತ್ತಿಗೆದಾರ ಕಿರಣ ನಾರಾಯಣ ಶಿರೂರ ಅವರು ಭಟ್ಕಳ ನಗರ ಠಾಣೆಗೆ ದೂರು ನೀಡಿದ್ದು, ಯಲ್ಲಿಮಕ್ಕಿ ಮಂಕಿ ನಿವಾಸಿ ಮಂಜುನಾಥ ಕೇಶವ ನಾಯ್ಕ ವಿರುದ್ಧ ಆರೋಪ ಮಾಡಿದ್ದಾರೆ.
ಕಳೆದ ಸೆ.8ರಂದು ಮಧ್ಯಾಹ್ನ 12.45ರ ಸುಮಾರಿಗೆ ತಾವು ಮನೆಯಲ್ಲಿದ್ದಾಗ ವಕೀಲರ ಮೂಲಕ ಕಾನೂನು ನೋಟಿಸ್ ಬಂದಿದ್ದು, ಅದರಲ್ಲಿ ಮಂಜುನಾಥ ನಾಯ್ಕ ಅವರಿಂದ 3 ಲಕ್ಷ ರೂ. ಕೈಗಡ ಸಾಲ ಪಡೆದಿರುವುದಾಗಿ ಆರೋಪಿಸಲಾಗಿದೆ ಎಂದು ಕಿರಣ ಶಿರೂರ ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ತಾವು ಮಂಜುನಾಥ ನಾಯ್ಕ ಅವರಿಂದ ಯಾವುದೇ ಹಣವನ್ನು ಸಾಲವಾಗಿ ಪಡೆದಿಲ್ಲ. ಅಲ್ಲದೆ, ಸಾಲಕ್ಕೆ ಸಂಬಂಧಿಸಿದಂತೆ ಯಾವುದೇ ಚೆಕ್ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ವಿರುದ್ಧ ಯಾವುದೇ ಆಧಾರವಿಲ್ಲದ ಸಾಲದ ಆರೋಪ ಹೊರಿಸಿ ಕಾನೂನು ನೋಟಿಸ್ ನೀಡುವ ಮೂಲಕ ತೇಜೋವಧೆ ಮತ್ತು ಮಾನಹಾನಿ ಮಾಡಲು ಪ್ರಯತ್ನಿಸಲಾಗಿದೆ ಎಂದು ಕಿರಣ ಶಿರೂರ ಆರೋಪಿಸಿದ್ದಾರೆ. ತಾವು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಉದ್ದೇಶಪೂರ್ವಕವಾಗಿ ಸುಳ್ಳು ಆರೋಪ ಹೊರಿಸಿ ಕಾನೂನು ಕ್ರಮಕ್ಕೆ ಸಿಲುಕಿಸುವ ಪ್ರಯತ್ನ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.
