ಕಾರವಾರ: ಪಡೆದ ಸಾಲದ ಮೊತ್ತಕ್ಕಿಂತ ಹಲವು ಪಟ್ಟು ಹಣವನ್ನು ಪಾವತಿಸಿದ್ದರೂ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಲಾಗುತ್ತಿದೆ. ಖಾಲಿ ಚೆಕ್ಗಳನ್ನು ವಾಪಸ್ ನೀಡುವಂತೆ ಕೇಳಿದ್ದಕ್ಕೆ ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಲಾಗಿದೆ ಎಂಬ ಆರೋಪದ ಮೇಲೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಶೇಜವಾಡದ 43 ವರ್ಷದ ಪ್ರಣೀತ ದಿಗಂಬರ ಶೇಜವಾಡಕರ ಅವರು ನೀಡಿದ ದೂರಿನ ಪ್ರಕಾರ, 2024ರ ಆಗಸ್ಟ್ 8ರಂದು ಹಣದ ತುರ್ತು ಅಗತ್ಯವಿದ್ದ ಹಿನ್ನೆಲೆಯಲ್ಲಿ ಪರಿಚಯದ ರೋಹನ್ ನರಸಿಂಹ ರಾಯ್ಕರ ಅವರಿಂದ ಸಾಲ ಪಡೆದಿದ್ದರು. ಒಂದು ಲಕ್ಷ ರೂಪಾಯಿ ಸಾಲಕ್ಕೆ 10 ಸಾವಿರ ರೂಪಾಯಿ ಬಡ್ಡಿ ಕಡಿತಗೊಳಿಸಿ 90 ಸಾವಿರ ರೂಪಾಯಿ ನೀಡಲಾಗಿತ್ತು ಎಂದು ದೂರಿದ್ದಾರೆ.
ಬಳಿಕ ರೋಹನ್ ನರಸಿಂಹ ರಾಯ್ಕರ, ಸುನೀಲ್ ಸದಾನಂದ ಕಲ್ಬುತಕರ ಹಾಗೂ ಸಂಪದಾ ಸುನೀಲ್ ಕಲ್ಬುತಕರ ಅವರಿಂದ ದೂರುದಾರ ಹಾಗೂ ಅವರ ಪತ್ನಿಯ ಯೂನಿಯನ್ ಬ್ಯಾಂಕ್ ಖಾತೆಗಳಿಗೆ ಒಟ್ಟು 12.28 ಲಕ್ಷ ರೂಪಾಯಿ ಹಣ ಪಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ 2024ರ ಡಿಸೆಂಬರ್ 7ರಂದು ಸಂಪದಾ ಸುನೀಲ್ ಅವರ ಹೆಸರಿನಲ್ಲಿ ಕರಾರು ಪತ್ರ ಮಾಡಿಕೊಡಲಾಗಿತ್ತು.
ನಂತರ ಅದನ್ನು ರದ್ದುಪಡಿಸಿ 2025ರ ಆಗಸ್ಟ್ 23ರಂದು ಸುನೀಲ್ ಸದಾನಂದ ಕಲ್ಬುತಕರ ಅವರ ಹೆಸರಿನಲ್ಲಿ ಮತ್ತೊಂದು ಕರಾರು ಪತ್ರ ಮಾಡಿಕೊಡಲಾಗಿತ್ತು. ಇದೇ ಸಂದರ್ಭದಲ್ಲಿ ಯೂನಿಯನ್ ಬ್ಯಾಂಕಿನ ಮೂರು ಖಾಲಿ ಚೆಕ್ಗಳನ್ನು ನೀಡಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆದರೆ, ಸಾಲದ ವ್ಯವಹಾರ ಅಲ್ಲಿಗೇ ಮುಗಿಯಲಿಲ್ಲ ಎನ್ನುವುದು ದೂರುದಾರರ ಆರೋಪ. 2024ರ ಆಗಸ್ಟ್ 8ರಿಂದ 2026ರ ಸೆಪ್ಟೆಂಬರ್ 1ರವರೆಗೆ ತಮ್ಮ ತಾಯಿ ಹಾಗೂ ಪತ್ನಿಯ ಬ್ಯಾಂಕ್ ಖಾತೆಗಳಿಂದ ಫೋನ್ಪೇ ಮತ್ತು ನಗದು ಮೂಲಕ ಆರೋಪಿಗಳಿಗೆ ಒಟ್ಟು 26.01 ಲಕ್ಷ ರೂಪಾಯಿ ಪಾವತಿಸಿರುವುದಾಗಿ ಅವರು ತಿಳಿಸಿದ್ದಾರೆ. ಅಸಲು ಸಾಲ ಹಾಗೂ ಬ್ಯಾಂಕ್ ಬಡ್ಡಿ ದರಕ್ಕೆ ಹೋಲಿಸಿದರೆ ಹೆಚ್ಚಿನ ಮೊತ್ತವನ್ನು ಈಗಾಗಲೇ ಪಾವತಿಸಿದ್ದರೂ, ಖಾಲಿ ಚೆಕ್ಗಳನ್ನು ಹಿಂದಿರುಗಿಸುವಂತೆ ಕೇಳಿದಾಗ ಆರೋಪಿಗಳು ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿ ಸುನೀಲ್ ಸದಾನಂದ ಕಲ್ಬುತಕರ ಅವರು ಬಡ್ಡಿ ಹಣ ನೀಡದಿದ್ದರೆ ಸರ್ವಿಸ್ ರಿವಾಲ್ವರ್ನಿಂದ ಗುಂಡು ಹಾರಿಸುವುದಾಗಿ, ಮುಂಬೈನಿಂದ ರೌಡಿಗಳನ್ನು ಕರೆಸಿ ಕೊಲೆ ಮಾಡಿಸುವುದಾಗಿ ಹಾಗೂ ಜೆಸಿಬಿ ತಂದು ಮನೆ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪ್ರಣೀತ ಆರೋಪಿಸಿದ್ದಾರೆ. ಅಲ್ಲದೆ, ಅವರ ಪತ್ನಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ.
ಇದರೊಂದಿಗೆ 13.50 ಲಕ್ಷ ರೂಪಾಯಿ ಮೊತ್ತದ ಚೆಕ್ನ್ನು ಬೌನ್ಸ್ ಮಾಡಿಸಿ, ಮತ್ತಷ್ಟು ಹಣ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪವೂ ದೂರಿನಲ್ಲಿ ದಾಖಲಾಗಿದೆ.
ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2026ರಡಿ ಬಿ.ಎನ್.ಎಸ್.-2023ರ ಕಲಂ 308(3), 351(2) ಸಹಿತ 3(5) ಹಾಗೂ ಕರ್ನಾಟಕ ವಿಪರೀತ ಬಡ್ಡಿ ವಸೂಲಾತಿ ನಿಷೇಧ ಕಾಯ್ದೆ-2004ರ ಕಲಂ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
ಕಂತು ಕಂತಾಗಿ ಹಣ ಸುರಿದರೂ ಮುಗಿಯದ ಬಡ್ಡಿ!ಜೀವ ಬೆದರಿಕೆ
