ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಚಾಲಕನಿಲ್ಲದೆ ಚಲಿಸಿದ ಲಾರಿ; ಏಳನೀರು ವ್ಯಾಪಾರಿಗೆ ದುರಂತ ಅಂತ್ಯ

Pakka News Web • 17 ಸೆಪ್ಟೆಂ 2026,

ಕುಮಟಾ: ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ನಿಲ್ಲಿಸಿದ್ದ ಲಾರಿಯೇ ಯಮನಾಗಿ ಪರಿಣಮಿಸಿದ ಘಟನೆ ಕುಮಟಾ ಪಟ್ಟಣದ ಎಪಿಎಂಸಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ. ಏಕಾಏಕಿ ನಿಲ್ಲಿಸಿದ್ದ ಲಾರಿ ಮುಂದೆ ಚಲಿಸಿದ್ದರಿಂದ ಏಳನೀರು ಮಾರಾಟ ಮಾಡುತ್ತಿದ್ದ ಸುಮಾರು 55 ವರ್ಷದ ವ್ಯಕ್ತಿಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ವೇಳೆ ಲಾರಿ ಚಾಲಕ ವಾಹನವನ್ನು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಸಮೀಪದ ಅಂಗಡಿಗೆ ಚಿಕನ್ ಖರೀದಿಸಲು ತೆರಳಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಲಾರಿ ಏಕಾಏಕಿ ಮುಂದೆ ಚಲಿಸಲು ಆರಂಭಿಸಿದ್ದು, ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯಲ್ಲಿದ್ದ ವ್ಯಾಪಾರಿಗಳತ್ತ ನುಗ್ಗಿದೆ. ಲಾರಿಯ ಅಡಿಗೆ ಸಿಲುಕಿದ ಏಳನೀರು ವ್ಯಾಪಾರಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಲಾರಿ ಮುಂದುವರಿದ ಪರಿಣಾಮ ಅಲ್ಲೇ ಹಣ್ಣು ವ್ಯಾಪಾರ ನಡೆಸುತ್ತಿದ್ದ ಮತ್ತೊಬ್ಬ ವ್ಯಕ್ತಿಗೂ ಡಿಕ್ಕಿಯಾಗಿದೆ. ಘಟನೆಯಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದ ಬೆನ್ನಲ್ಲೇ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಬಳಿಕ ಲಾರಿ ಚಾಲಕ ಅಲ್ಲಿಂದ ತೆರಳಿದ್ದಾನೆ ಎನ್ನಲಾಗಿದ್ದು, ಅಪಘಾತದ ನಿಖರ ಕಾರಣ ಹಾಗೂ ಚಾಲಕನ ನಿರ್ಲಕ್ಷ್ಯದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ವಿಷಯ ತಿಳಿದು ಕುಮಟಾ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೀಡಾದ ಲಾರಿಯನ್ನು ವಶಕ್ಕೆ ಪಡೆದು, ಘಟನೆಯ ಹಿನ್ನೆಲೆ ಹಾಗೂ ಚಾಲಕನ ವಿರುದ್ಧದ ಮುಂದಿನ ಕಾನೂನು ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250