ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಶ್ರೀಗಂಧ ಕಳ್ಳಸಾಗಣೆ: ನಾಲ್ವರು ಬಂಧನ, ಒಬ್ಬ ಪರಾರಿ

Pakka News Web • 24 ಸೆಪ್ಟೆಂ 2026,

ಯಲ್ಲಾಪುರ: ಬಿಸಗೋಡು ಮಾರ್ಗವಾಗಿ ಬೈಕ್‌ನಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಕಾಡಿನಲ್ಲಿ ಪರಾರಿಯಾಗಿರುವ ಘಟನೆ ಯಲ್ಲಾಪುರದಲ್ಲಿ ನಡೆದಿದೆ.

ಮಾಗೋಡಿನ ನಾಗೇಂದ್ರ ಮಂಜುನಾಥ ಸಿದ್ದಿ, ಅಂಕೋಲಾ ಕಮ್ಮಾಣಿಯ ರವಿ ಕೃಷ್ಣ ಸಿದ್ದಿ, ಯಲ್ಲಾಪುರ ಕಾಳಮ್ಮನಗರದ ಮಂಜುನಾಥ ಪ್ರಭಾಕರ ಸಿದ್ದಿ ಹಾಗೂ ಲಕ್ಷಣ ಪ್ರಭಾಕರ ಸಿದ್ದಿ ಬಂಧಿತರು. ವಜ್ರಳ್ಳಿಯ ಸತೀಶ್ ಸಿದ್ದಿ ಅರಣ್ಯ ಸಿಬ್ಬಂದಿಯ ಕೈಗೆ ಸಿಗದೆ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.

ಆರೋಪಿಗಳು ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಟಾವು ಮಾಡಿ ಸಾಗಿಸುತ್ತಿದ್ದ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ಲಭಿಸಿತ್ತು. ಸೆ.23ರಂದು ಬಿಸಗೋಡು ಮಾರ್ಗದ ಸ್ಮಶಾನದ ಸಮೀಪದಿಂದ ಬೈಕ್‌ನಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿರುವ ಕುರಿತು ಸ್ಥಳೀಯರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆದಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು

ಉಪಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ ಅಜೀಜ್ ಶೇಖ್ ಅವರ ಸೂಚನೆಯಂತೆ ವಲಯ ಅರಣ್ಯಾಧಿಕಾರಿ ಮಂಜುನಾಥ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಗಳನ್ನು ಸುತ್ತುವರಿದು, ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸತೀಶ್ ಸಿದ್ದಿ ಮಾತ್ರ ತಪ್ಪಿಸಿಕೊಂಡು ಕಾಡಿನೊಳಗೆ ಪರಾರಿಯಾಗಿದ್ದಾನೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಬಂಧಿತರ ಬಳಿಯಿಂದ ಸಿಪ್ಪೆ ಕೆತ್ತಿದ 12 ಶ್ರೀಗಂಧದ ತುಂಡುಗಳು ಸೇರಿದಂತೆ ಒಟ್ಟು ಸುಮಾರು 8.80 ಕೆ.ಜಿ. ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ. ಕಳ್ಳಸಾಗಣೆಗೆ ಬಳಸಿದ್ದ ಬೈಕ್‌ನ್ನೂ ಅರಣ್ಯ ಸಿಬ್ಬಂದಿ ಜಪ್ತು ಮಾಡಿದ್ದಾರೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ದರ್ಶನ ವಿ.ಎಸ್., ಜಿ. ಸಂತೋಷ, ಶ್ರೀನಿವಾಸ ನಾಯ್ಕ, ಸಂಜಯಕುಮಾರ ಬೋರಗಲ್ಲಿ ಸೇರಿದಂತೆ ಅರಣ್ಯ ಪಾಲಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಬಂಧಿತ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಾರಿಯಾಗಿರುವ ಸತೀಶ್ ಸಿದ್ದಿಗಾಗಿ ಅರಣ್ಯ ಇಲಾಖೆ ಶೋಧ ಕಾರ್ಯ ನಡೆದಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250