ಕಾರವಾರ:ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಕಾರವಾರ ತಾಲೂಕಿನ ಅರ್ಗಾ ಫ್ಲೈಓವರ್ ಬಳಿ ರವಿವಾರ ನಡೆದಿದೆ. ಅಪಘಾತದ ಬಳಿಕ ಬೈಕ್ ಬೆಂಕಿಗಾಹುತಿಯಾಗಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಬಿಣಗಾದ ಒಕ್ಕಲಕೇರಿ ನಿವಾಸಿ ಹಾಗೂ ಬಜಾಜ್ ಫೈನಾನ್ಸ್ ಸಿಬ್ಬಂದಿ ಗಣಪತಿ ಗೌಡ (42) ಮೃತಪಟ್ಟವರು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ ಹೊಡೆದ ಬಳಿಕ ಗಣಪತಿ ಗೌಡ ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದ್ದು, ಅದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಮತ್ತೊಂದು ವಾಹನ ಅವರ ಮೇಲೆ ಹರಿದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ತೀವ್ರವಾಗಿ ಗಾಯಗೊಂಡ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಬೆನ್ನಲ್ಲೇ ಬೈಕ್ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಉರಿದಿದೆ. ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜನರು ಜಮಾಯಿಸಿದ್ದು, ಘಟನೆಯ ಭೀಕರತೆಯಿಂದ ಆತಂಕಗೊಂಡರು. ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ವಾಹನದ ಸುಳಿವು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.
