ಕಾರವಾರ: ನಗರದ ಸಂಚಾರಿ ಪೊಲೀಸ್ ಠಾಣೆ ಎದುರು ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ನಲ್ಲಿದ್ದ ಇಬ್ಬರಿಗೆ ಚಿಕ್ಕ ಪುಟ್ಟ ಗಾಯವಾದ ಘಟನೆ ಬುಧವಾರ ನಡೆದಿದೆ.
ಹಬ್ಬುವಾಡ ಕಡೆಯಿಂದ ಕಾರವಾರ ನಗರದತ್ತ ಇಬ್ಬರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಸಂಚಾರಿ ಪೊಲೀಸ್ ಠಾಣೆ ಎದುರು ಕೇರಳ ನೋಂದಣಿಯ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರರಿಗೆ ಗಾಯಗಳಾಗಿವೆ.
ಘಟನೆ ಗಮನಿಸಿದ ಸಮಾಜ ಸೇವಕ ಸೂರಜ್ ಕುರುಮಕರ್ ಅವರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವಲ್ಲಿ ನೆರವಾದರು. ಈ ವೇಳೆ ಕಾಲೇಜಿನ ವಿದ್ಯಾರ್ಥಿಗೂ ಗಾಯವಾಗಿದೆ. ಅಪಘಾತದ ಮಾಹಿತಿ ಪಡೆದ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
