ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ದೇವಸ್ಥಾನ ಕಳ್ಳತನ ಪ್ರಕರಣ:  ಆರೋಪಿ ಬಂಧನ

Pakka News Web • 30 ಸೆಪ್ಟೆಂ 2026,

ಭಟ್ಕಳ: ದೇವಸ್ಥಾನದ ಬೀಗ ಒಡೆದು ದೇವರ ಆಭರಣಗಳನ್ನು ಕಳವು ಮಾಡಿದ್ದ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸರು ಕ್ಷಿಪ್ರವಾಗಿ ಭೇದಿಸಿದ್ದು, ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿತನನ್ನು ಬಂಧಿಸಿ ₹1.07 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಭಟ್ಕಳ ತಾಲೂಕಿನ ಬೆಳಕೆ, ಗರಡಿಹಿತ್ತು ಗ್ರಾಮದ ಶ್ರೀ ಭಂಟಗೊಂಡ ದೇವಸ್ಥಾನದಲ್ಲಿ ಸೆ.28ರ ರಾತ್ರಿ 10ರಿಂದ ಸೆ.29ರ ಬೆಳಗಿನ ಜಾವ 5 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿತ್ತು. ದೇವಸ್ಥಾನದ ಬಾಗಿಲಿನ ಬೀಗ ಹಾಗೂ ಕಟ್ಟಿಗೆಯ ಬಾಗಿಲನ್ನು ಮುರಿದು ಒಳನುಗ್ಗಿದ್ದ ಕಳ್ಳರು, ದೇವರ ಕುತ್ತಿಗೆಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.

 ಈ ಕುರಿತು ನೀಡಲಾದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 225/2026ರಂತೆ ಬಿಎನ್‌ಎಸ್ 2023ರ ಕಲಂ 331(4), 305(ಡಿ) ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಆರೋಪಿತನ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸರು ತನಿಖೆ ನಡೆಸಿ, ಭಟ್ಕಳ ತಾಲೂಕಿನ ಹೆಬಳೆಯ ತಲಹಾ ಕಾಲೋನಿ, ಹನಿಪಾಬಾದ್ ನಿವಾಸಿ ಸೈಯದ್ ಯೂನುಸ್ (26) ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿತನಿಂದ 5.340 ಗ್ರಾಂ ತೂಕದ ಸುಮಾರು ₹70 ಸಾವಿರ ಮೌಲ್ಯದ ಬಂಗಾರದ ಸರ, 20 ಗ್ರಾಂ ತೂಕದ ಸುಮಾರು ₹2,300 ಮೌಲ್ಯದ ಬೆಳ್ಳಿಯ ಕರಿಮಣಿ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಸುಮಾರು ₹35 ಸಾವಿರ ಮೌಲ್ಯದ ಬಜಾಜ್ ಪಲ್ಸ್ ಮೋಟಾರ್ ಸೈಕಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು ₹1,07,300 ಮೌಲ್ಯದ ಸ್ವತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬಂಧಿತ ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಾಣು ಗುಪ್ತಾ ಅವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ದಿವಾಕರ ಪಿ.ಎಂ. ಅವರ ನೇತೃತ್ವದಲ್ಲಿ ತನಿಖೆ ನಡೆಯಿತು. 

ತನಿಖಾಧಿಕಾರಿ ಭರಮಪ್ಪ ಬೆಳಗಲಿ, ಪೊಲೀಸ್ ಉಪನಿರೀಕ್ಷಕ ಮಲ್ಲಿಕಾರ್ಜುನಯ್ಯ ಕೂರಾಣಿ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಮಂಜುನಾಥ ಗೊಂಡ, ಈರಣ್ಣ ಪೂಜೇರಿ, ಬಾಗಪ್ಪ ಕಡಕಲ್ ಮತ್ತು ನಿಂಗನಗೌಡ ಪಾಟೀಲ್ ಅವರು ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದರು.

ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಿ ಆರೋಪಿತನನ್ನು ಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250