ಕಾರವಾರ:ಅನಧಿಕೃತವಾಗಿ ದ್ವಿಚಕ್ರ ವಾಹನಗಳನ್ನು ಬಾಡಿಗೆಗೆ ನೀಡುತ್ತಿರುವ ಬಗ್ಗೆ ದೂರು ಸಲ್ಲಿಕೆಯಾದ ಬೆನ್ನಲ್ಲೇ ನಗರದ ಕೋಡಿಭಾಗದ ಅಳ್ವೇವಾಡಾಕ್ಕೆ ಆರ್ಟಿಒ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಾರವಾರ ನಗರದಲ್ಲಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಬೈಕ್ಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ ಎಂದು ಆರೋಪಿಸಿ ರಾಹುಲ ನಾಯ್ಕ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಅಳ್ವೇವಾಡಾ ಕೋಡಿಭಾಗದಲ್ಲಿರುವ ನಾಗನಾಥ ಬೈಕ್ ರೆಂಟಲ್ ಸಂಸ್ಥೆಯು ಅನಧಿಕೃತವಾಗಿ ಬೈಕ್ ಬಾಡಿಗೆ ವ್ಯವಹಾರ ನಡೆಸುತ್ತಿದೆ ಎಂದು ದೂರು ನೀಡಿದ್ದರು.

ರಾಹುಲ ನಾಯ್ಕ, ಪ್ರವಾಸಿಗರಿಗೆ ಬೈಕ್ ಬಾಡಿಗೆಗೆ ನೀಡುತ್ತಿರುವುದನ್ನು ತೋರಿಸುವ ಛಾಯಾಚಿತ್ರಗಳನ್ನೂ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಕಾನೂನುಬದ್ಧವಾಗಿ ಪರವಾನಗಿ ಪಡೆದು ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳಿಗೆ ಇಂತಹ ಅನಧಿಕೃತ ಚಟುವಟಿಕೆಗಳಿಂದ ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರ್ಟಿಒ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ರೆಂಟಲ್ ಬೈಕ್ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾಗ ಸಂಬಂಧಪಟ್ಟವರು ಕೀ ನೀಡಿಲ್ಲ ಎಂದು ಅಧಿಕಾರಿಗಳು ಗರಂ ಆದರು. ಅನಧಿಕೃತವಾಗಿ ವಾಹನಗಳನ್ನು ಬಾಡಿಗೆಗೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನಿಯಮಬಾಹಿರವಾಗಿ ನಡೆಯುತ್ತಿರುವ ವ್ಯವಹಾರಕ್ಕೆ ಕಡಿವಾಣ ಹಾಕಬೇಕು ಎಂದು ರಾಹುಲ ನಾಯ್ಕ ಆಗ್ರಹಿಸಿದ್ದಾರೆ.
