ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

State-National

ಕೊಂಕಣ ರೈಲ್ವೆ ಪ್ರಯಾಣಿಕರಿಗೆ ಬಂಪರ್ ಕೊಡುಗೆ!

Pakka News Web • 19 ಜೂನ್ 2026,

ಉತ್ತರ ಕನ್ನಡ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ದೀರ್ಘಕಾಲದ ಕನಸು ಕೊನೆಗೂ ನನಸಾಗುತ್ತಿದೆ. ಜಿಲ್ಲೆಯ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯಕ್ಕೆ ದೊಡ್ಡ ವೇಗ ಸಿಗುತ್ತಿದ್ದು, ಜೂನ್ 20ರಂದು ಮಧ್ಯಾಹ್ನ 2:00 ಗಂಟೆಗೆ ಕುಮಟಾ ರೈಲ್ವೆ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ರೈಲು ವಿಸ್ತರಣಾ ಸೇವೆಗೆ ಅದ್ಧೂರಿ ಚಾಲನೆ ಸಿಗಲಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಿರಂತರ ಶ್ರಮ ಮತ್ತು ವಿಶೇಷ ಪ್ರಯತ್ನದ ಫಲವಾಗಿ ಜಿಲ್ಲೆಗೆ ಈ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಪ್ರಯಾಣಿಕರ ಅತ್ಯಾಧುನಿಕ ಸೌಲಭ್ಯಗಳು ಮಂಜೂರಾಗಿದ್ದು, ಅಂದು ಸಂಸದರೇ ಇವುಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿದ್ದಾರೆ.

 ಭಕ್ತಾದಿಗಳಿಗೆ ಹಾಗೂ ಪ್ರವಾಸಿಗರಿಗೆ ಸಿಹಿ ಸುದ್ದಿ

ಜಿಲ್ಲೆಯ ಸಾರ್ವಜನಿಕರು, ಪ್ರವಾಸಿಗರು ಮತ್ತು ಪ್ರಮುಖವಾಗಿ ತಿರುಪತಿಗೆ ಪ್ರಯಾಣಿಸುವ ಭಕ್ತಾದಿಗಳಿಗೆ ಈ ಕಾರ್ಯಕ್ರಮದ ಮೂಲಕ ಬಹುದೊಡ್ಡ ಕೊಡುಗೆ ಸಿಗುತ್ತಿದೆ. ಈ ಹಿಂದೆ ಕಾಚಿಗುಡ ಮತ್ತು ಮುರುಡೇಶ್ವರ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12790 ಮತ್ತು 12789 ಅನ್ನು ಇದೀಗ ಮುರುಡೇಶ್ವರದಿಂದ ಕುಮಟಾದವರೆಗೆ ಅಧಿಕೃತವಾಗಿ ವಿಸ್ತರಿಸಲಾಗುತ್ತಿದೆ. ಜಿಲ್ಲೆಯ ಧಾರ್ಮಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿರುವ ಈ ವಿಸ್ತರಿತ ರೈಲು ಸೇವೆಗೆ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹಸಿರು ನಿಶಾನೆ ತೋರಲಿದ್ದಾರೆ.

 ಜಂಟಿ ಲೋಕಾರ್ಪಣೆಯ ಸಂಭ್ರಮ

ಕೇವಲ ಕುಮಟಾ ಮಾತ್ರವಲ್ಲದೇ ಮುರುಡೇಶ್ವರ, ಗೋಕರ್ಣ ಮತ್ತು ಭಟ್ಕಳ ರೈಲ್ವೆ ನಿಲ್ದಾಣಗಳಲ್ಲಿಯೂ ಸಹ ಪ್ರಯಾಣಿಕರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಾಗಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲಾ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳನ್ನು ಅಂದು ಕುಮಟಾ ನಿಲ್ದಾಣದಿಂದಲೇ ಏಕಕಾಲದಲ್ಲಿ ಜಂಟಿಯಾಗಿ ಲೋಕಾರ್ಪಣೆಗೊಳಿಸುವುದು ಈ ಸಮಾರಂಭದ ವಿಶೇಷತೆಯಾಗಿದೆ.

ಈ ಮಹತ್ವದ ಹಾಗೂ ಐತಿಹಾಸಿಕ ಅಭಿವೃದ್ಧಿ

ಸಮಾರಂಭದಲ್ಲಿ ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಅವರೊಂದಿಗೆ ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ, ಕೊಂಕಣ ರೈಲ್ವೆಯ ವಿಭಾಗೀಯ ವ್ಯವಸ್ಥಾಪಕರು, ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ಸ್ಥಳೀಯ ಆಡಳಿತದ ಪ್ರಮುಖ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಂಸದರ ಕಾರ್ಯಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250