ಅಕ್ಟೋಬರ್ 25, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಗೃಹ ಜ್ಯೋತಿ ಯೋಜನೆ; ದಾಖಲೆ ಸಲ್ಲಿಕೆಗೆ ಸೂಚನೆ

Pakka News Web • 19 ಆಕ್ಟೋ 2026,

ಕಾರವಾರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆಯಡಿ ಅರ್ಹ ಫಲಾನುಭವಿಗಳ ಸಮೀಕ್ಷಾ ಕಾರ್ಯವು ಹೆಸ್ಕಾಂ ವತಿಯಿಂದ ಭುರುವಾಗಿ ಸಾಗಿದ್ದು, ಜುಲೈ 1ರಿಂದ ಸಿಬ್ಬಂದಿ ಸರ್ವೇ ಕಾರ್ಯವನ್ನು ಕೈಗೊಂಡಿದ್ದಾರೆ.

ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ವಿದ್ಯುತ್ ಸ್ಥಾವರಗಳು ಬಾಗಿಲು ಹಾಕಿರುವುದು (Door Lock) ಹಾಗೂ ಖಾಲಿ ಇರುವುದು (Vacant) ಕಂಡುಬಂದಿರುವ ಹಿನ್ನೆಲೆಯಲ್ಲಿ, ಅಂತಹ ಗ್ರಾಹಕರ ಮೊಬೈಲ್ ಸಂಖ್ಯೆಗೆ ಅಧಿಕೃತ ಸಂದೇಶಗಳನ್ನು ಕಳುಹಿಸಲಾಗಿದೆ. ಈ ಸೂಚನೆ ಪಡೆದ ಗ್ರಾಹಕರು ಹತ್ತು ದಿನಗಳ ಒಳಗಾಗಿ ನಿಗದಿತ ದಾಖಲೆಗಳೊಂದಿಗೆ ಸಮೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಹೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಂದೇಶ ಸ್ವೀಕರಿಸಿದ ಗ್ರಾಹಕರು ಹತ್ತು ದಿನಗಳ ಒಳಗಾಗಿ ಹೊನ್ನಾವರ, ಕುಮಟಾ ಹಾಗೂ ಭಟ್ಕಳದ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗದ ಕಚೇರಿಗಳಿಗೆ ಖುದ್ದು ಭೇಟಿ ನೀಡಬೇಕು. ಈ ವೇಳೆ ಇತ್ತೀಚಿನ ವಿದ್ಯುತ್ ಬಿಲ್, ಫಲಾನುಭವಿಗಳ ಆಧಾರ್ ಕಾರ್ಡ್ ಹಾಗೂ ಅದರೊಂದಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (ಒಟಿಪಿ ದೃಢೀಕರಣಕ್ಕಾಗಿ), ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ.

ಜೊತೆಗೆ, ಫಲಾನುಭವಿಗಳ ವರ್ಗದ ವಿವರ ಹಾಗೂ ಗ್ರಾಹಕರು ಬಾಡಿಗೆದಾರರಾಗಿದ್ದಲ್ಲಿ ಬಾಡಿಗೆ ಕರಾರು ಪತ್ರವನ್ನು ಒದಗಿಸಬೇಕು. ಒಂದು ವೇಳೆ ಗ್ರಾಹಕರು ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಪ್ಯಾನ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಹಕರಿಸಿ ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಹೆಸ್ಕಾಂ ಹೊನ್ನಾವರ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜೀನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250