ಗೋಕರ್ಣ: ಸಮುದ್ರದ ಅಲೆಗಳ ನಡುವೆ ಈಜಾಡುತ್ತಿದ್ದ ಪ್ರವಾಸಿಗರಿಗೆ ಸುಳಿಯೊಂದು ಅಪಾಯ ತಂದೊಡ್ಡಿದ ಘಟನೆ ಗೋಕರ್ಣದ ಮೇನ್ ಬೀಚ್ನಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಈ ವೇಳೆ ಸುಳಿಗೆ ಸಿಲುಕಿ ದಡ ಸೇರಲಾಗದೆ ಮುಳುಗುವ ಸ್ಥಿತಿಯಲ್ಲಿದ್ದ ಮೂವರು ಪ್ರವಾಸಿಗರನ್ನು ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ಹಾಗೂ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಹಮದ್ ಅಪ್ಸನ್ ಅಲಿ (21), ಆಶ್ರಫ್ ಮೆಹಬೂಬ ಅಲಿ (22) ಹಾಗೂ ಚಿಕ್ಕಬಳ್ಳಾಪುರ ಮೂಲದ ಶ್ರೀನಿವಾಸ ವೆಂಕಟಸ್ವಾಮಿ (35) ರಕ್ಷಿಸಲ್ಪಟ್ಟ ಪ್ರವಾಸಿಗರು.
ಬುಧವಾರ ಸಂಜೆ ಸುಮಾರು 4.30ರ ವೇಳೆಗೆ ಆರು ಮಂದಿ ಸ್ನೇಹಿತರು ಮೇನ್ ಬೀಚ್ನಲ್ಲಿ ಸಮುದ್ರಕ್ಕೆ ಇಳಿದು ಈಜಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಲ್ಲಿ ಮೂವರು ಸಮುದ್ರದ ಸುಳಿಗೆ ಸಿಲುಕಿ ದಡಕ್ಕೆ ಮರಳಲಾಗದೆ ಪರದಾಡತೊಡಗಿದರು. ಅಪಾಯವನ್ನು ಗಮನಿಸಿದ ಕರ್ತವ್ಯ ನಿರತ ಜೀವ ರಕ್ಷಕ ಸಿಬ್ಬಂದಿ ಮತ್ತು ಮೇನ್ ಬೀಚ್ನ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ ಕ್ಷಣಾರ್ಧದಲ್ಲಿ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಜಂಟಿ ಕಾರ್ಯಾಚರಣೆಯ ಮೂಲಕ ಮೂವರನ್ನೂ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಜೀವ ರಕ್ಷಕರಾದ ಮೋಹನ್ ಅಂಬಿಗ, ರೋಷನ್ ಖಾರ್ವಿ ಹಾಗೂ ಲೋಕೇಶ್ ಹರಿಕಂತ್ರ ಪಾಲ್ಗೊಂಡಿದ್ದರು. ಲೈಫ್ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಹಾಗೂ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿಗಳಾದ ದೀಪಕ್ ಗೌಡ ಮತ್ತು ಮಹೇಶ್ ಹೊಸಕಟ್ಟೆ ಸಹಕರಿಸಿದರು.
ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ತ್ವರಿತ ಸ್ಪಂದನೆಯಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದು ತಪ್ಪಿದ್ದು, ಮೂವರು ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮುದ್ರದಲ್ಲಿ ಈಜಾಡುವಾಗ ಪ್ರವಾಸಿಗರು ಎಚ್ಚರಿಕೆ ವಹಿಸುವುದು ಹಾಗೂ ಜೀವ ರಕ್ಷಕ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವುದು ಅತ್ಯಗತ್ಯವಾಗಿದೆ.
