ಅಕ್ಟೋಬರ್ 21, 2026
ಬುಧವಾರ

ನಮ್ಮನ್ನು ಅನುಸರಿಸಿ

Uttara-Kannada

ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಕೆಆರ್‌ಎಸ್‌ಗೆ ಬೆಂಬಲ ನೀಡುವಂತೆ ನಿಶಾಂತ ಬಂಕಾಪೂರ ಮನವಿ

Pakka News Web • 21 ಆಕ್ಟೋ 2026,

ಕಾರವಾರ:ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ, ಪಾರದರ್ಶಕ ನೇಮಕಾತಿ ಹಾಗೂ ಯುವಜನರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮತದಾರರು ನಿರ್ಧಾರ ಕೈಗೊಳ್ಳಬೇಕು. ಪ್ರಾಮಾಣಿಕ ರಾಜಕಾರಣಕ್ಕೆ ಬೆಂಬಲ ನೀಡುವ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯಾದ ನಿಶಾಂತ ಶಂಕರ ಬಂಕಾಪೂರ ಅವರನ್ನು ಬೆಂಬಲಿಸಬೇಕು ಎಂದು ಪಕ್ಷದ ವತಿಯಿಂದ ಪದವೀಧರ ಮತದಾರರಲ್ಲಿ ಮನವಿ ಮಾಡಲಾಗಿದೆ.

ಯುವಜನರ ಸಮಸ್ಯೆಗಳನ್ನು ಅರಿತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸಮರ್ಥ ನಾಯಕತ್ವದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯುವ ಸಾವಯವ ಕೃಷಿ ತಜ್ಞ ನಿಶಾಂತ ಶಂಕರ ಬಂಕಾಪೂರ ಅವರನ್ನು ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ ಎಂದು ಕೆಆರ್‌ಎಸ್ ಪಕ್ಷ ತಿಳಿಸಿದೆ. ಯುವಜನರ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ಪ್ರಾಮಾಣಿಕ ಜನಪರ ರಾಜಕಾರಣವನ್ನು ಮುನ್ನಡೆಸುವ ಉದ್ದೇಶದಿಂದ ಯುವ ಅಭ್ಯರ್ಥಿಗಳಿಗೆ ಪಕ್ಷ ಆದ್ಯತೆ ನೀಡುತ್ತಿದೆ ಎಂದು ಹೇಳಿದೆ.

ನಿಶಾಂತ ಬಂಕಾಪೂರ ಅವರು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಷಯದಲ್ಲಿ ಬಿಎಸ್ಸಿ ಪದವಿ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ತಳಿ ಶಾಸ್ತ್ರ ಮತ್ತು ಸಸ್ಯ ತಳಿ ಅಭಿವೃದ್ಧಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಅವರು ರೈತರೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇದರಿಂದ ಕೃಷಿ ಕ್ಷೇತ್ರದ ಸಮಸ್ಯೆಗಳ ಜೊತೆಗೆ ಪದವೀಧರರು, ನಿರುದ್ಯೋಗಿ ಯುವಜನರು ಹಾಗೂ ಯುವ ರೈತರು ಎದುರಿಸುತ್ತಿರುವ ಸವಾಲುಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿ ಧ್ವನಿ ಎತ್ತಲು ಸಾಧ್ಯವಾಗಲಿದೆ ಎಂಬುದು ಪಕ್ಷದ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದರೂ, ಯುವಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಆರ್‌ಎಸ್ ಆರೋಪಿಸಿದೆ. ಯುವಜನರ ಹೋರಾಟದ ಪರಿಣಾಮವಾಗಿ ಕೆಲವು ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ದೊರೆತಿದ್ದರೂ, ನೇಮಕಾತಿಗಳಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ಆರೋಪಗಳಿಂದಾಗಿ ಬಡ ಮತ್ತು ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಪಕ್ಷ ಕಳವಳ ವ್ಯಕ್ತಪಡಿಸಿದೆ.

ಸರ್ಕಾರಿ ಉದ್ಯೋಗಗಳ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡುವುದು, ಕರ್ನಾಟಕ ಲೋಕಸೇವಾ ಆಯೋಗದಲ್ಲಿನ ಭ್ರಷ್ಟಾಚಾರದ ಆರೋಪಗಳಿಗೆ ಕಡಿವಾಣ ಹಾಕುವುದು ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದು ಇಂದಿನ ಪ್ರಮುಖ ಅಗತ್ಯಗಳಾಗಿವೆ. ಗುತ್ತಿಗೆ ಆಧಾರಿತ ನೇಮಕಾತಿಗಳಿಗೆ ಬದಲಾಗಿ ಉದ್ಯೋಗ ಭದ್ರತೆಗೆ ಆದ್ಯತೆ ನೀಡಬೇಕು. ಸ್ವಯಂ ಉದ್ಯೋಗ ಆರಂಭಿಸಲು ಯುವಜನರಿಗೆ ಅಗತ್ಯವಾದ ಸಾಲ ಸೌಲಭ್ಯ, ಕೌಶಲ್ಯ ತರಬೇತಿ ಮತ್ತು ಸೂಕ್ತ ಮಾರ್ಗದರ್ಶನ ಒದಗಿಸಬೇಕು. ಈ ಸೌಲಭ್ಯಗಳ ವಿತರಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆದು ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.

ಖಾಸಗಿ ವಲಯದ ಉದ್ಯೋಗ, ವ್ಯಾಪಾರ ಹಾಗೂ ಸ್ವಯಂ ಉದ್ಯೋಗ ಕ್ಷೇತ್ರಗಳಲ್ಲಿಯೂ ರಾಜ್ಯದ ಯುವಜನರಿಗೆ ಸೂಕ್ತ ಅವಕಾಶಗಳು ದೊರೆಯಬೇಕು. ಉದ್ಯೋಗಕ್ಕಾಗಿ ವಿದ್ಯಾಭ್ಯಾಸ ಮಾಡಿದ ಪದವೀಧರರು ವರ್ಷಗಟ್ಟಲೆ ಕಾಯುವ ಪರಿಸ್ಥಿತಿಗೆ ಅಂತ್ಯ ಹಾಡಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಭ್ರಷ್ಟಾಚಾರವು ರಾಜ್ಯದ ಅಭಿವೃದ್ಧಿಗೆ ದೊಡ್ಡ ಅಡ್ಡಿಯಾಗಿದ್ದು, ಅದನ್ನು ನಿಯಂತ್ರಿಸದೆ ಯುವಜನರಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂಬುದು ಕೆಆರ್‌ಎಸ್ ಪಕ್ಷದ ನಿಲುವಾಗಿದೆ.

ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಕೆಆರ್‌ಎಸ್ ಪಕ್ಷ ನಿರಂತರವಾಗಿ ಹೋರಾಟ ನಡೆಸುತ್ತಿದ್ದು, ಭ್ರಷ್ಟಾಚಾರಮುಕ್ತ ಆಡಳಿತ ಮತ್ತು ಜನಪರ ವ್ಯವಸ್ಥೆಯ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ತಿಳಿಸಿದೆ. ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರು ಅಭ್ಯರ್ಥಿಯ ಆಯ್ಕೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಯುವಜನರ ಭವಿಷ್ಯದ ವಿಚಾರಗಳನ್ನು ಪರಿಗಣಿಸಬೇಕು. ಬದಲಾವಣೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ನಿಶಾಂತ ಶಂಕರ ಬಂಕಾಪೂರ ಅವರಿಗೆ ಬೆಂಬಲ ನೀಡಿ, ಕೆಆರ್‌ಎಸ್ ಪಕ್ಷವನ್ನು ಆಯ್ಕೆ ಮಾಡುವಂತೆ ಪಕ್ಷದ ವತಿಯಿಂದ ಪದವೀಧರ ಮತದಾರರಲ್ಲಿ ಮನವಿ ಮಾಡಲಾಗಿದೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250