ಕಾರವಾರ:ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬಡ ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ ಉತ್ತರ ಕನ್ನಡ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸೂರಜ್ ನಾಯ್ಕ ಸೋನಿ ಅವರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮುಂದಿನ ತಿಂಗಳು ಬೃಹತ್ ಪ್ರಮಾಣದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿಸ್ತರಿಸಲು ಸರ್ಕಾರ ಮುಂದಾಗಿರುವುದಕ್ಕೆ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಹೊರಡಿಸಿರುವ ಅಂತಿಮ ಗೆಜೆಟ್ ಅಧಿಸೂಚನೆಯು ಸಂಪೂರ್ಣವಾಗಿ ರೈತ ವಿರೋಧಿ ಹಾಗೂ ದಬ್ಬಾಳಿಕೆಯಿಂದ ಕೂಡಿದ್ದಾಗಿದೆ ಎಂದು ಸೂರಜ್ ನಾಯ್ಕ ಸೋನಿ ಕಿಡಿಕಾರಿದ್ದಾರೆ. ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಮುಖವಾಡ ಧರಿಸಿ ಜಾರಿಗೆ ತರಲಾಗುತ್ತಿರುವ ಈ ಯೋಜನೆಯ ಹಿಂದೆ ಬೃಹತ್ ರಿಯಲ್ ಎಸ್ಟೇಟ್ ದಂಧೆ ಅಡಗಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ಮಣ್ಣಿನ ಮಕ್ಕಳ ಹಾಗೂ ರೈತರ ಹಿತರಕ್ಷಣೆಯನ್ನು ಸರ್ಕಾರ ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಹಂತದಲ್ಲೇ ಸುಮಾರು 498.34 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಇದರಿಂದಾಗಿ ಒಟ್ಟು 755 ರೈತ ಕುಟುಂಬಗಳು ಬೀದಿಗೆ ಬೀಳುವ ಭೀತಿ ಎದುರಿಸುತ್ತಿವೆ. ಈ ಯೋಜನೆಯಿಂದ ಸಂತ್ರಸ್ತರಾಗುತ್ತಿರುವವರಲ್ಲಿ ಬರೋಬ್ಬರಿ 614 ರೈತರು ಅಂದರೆ ಶೇಕಡಾ 81 ಕ್ಕೂ ಹೆಚ್ಚು ಜನ ಕೇವಲ ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಅತಿ ಸಣ್ಣ ಕೃಷಿಕರಾಗಿದ್ದಾರೆ ಎಂಬ ಆತಂಕಕಾರಿ ಅಂಕಿ-ಅಂಶಗಳನ್ನು ಅವರು ಬಿಡುಗಡೆ ಮಾಡಿದ್ದಾರೆ.
ತಮ್ಮ ಒಪ್ಪತ್ತಿನ ಗಂಜಿಗಾಗಿ ಕೇವಲ ಅರ್ಧ ಅಥವಾ ಕಾಲು ಎಕರೆ ಜಮೀನನ್ನೇ ನಂಬಿ ಬದುಕುತ್ತಿರುವ ದಲಿತ ಹಾಗೂ ಹಿಂದುಳಿದ ವರ್ಗಗಳ ಬಡ ಕುಟುಂಬಗಳನ್ನು ಈ ಯೋಜನೆ ಸಂಪೂರ್ಣವಾಗಿ ನಾಶಮಾಡಲು ಹೊರಟಿದೆ ಎಂದು ಆತಂಕ ವ್ಯಕ್ತಪಡಿಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷರು, ಸರ್ಕಾರ ತಕ್ಷಣವೇ ಈ ರೈತ ವಿರೋಧಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು ಬಡ ಕೃಷಿಕರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
