ಮುಂಡಗೋಡ: ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 75 ವರ್ಷದ ವೃದ್ಧೆಯನ್ನು ಭೀಕರವಾಗಿ ಹ*ತ್ಯೆಗೈದು, ಚಿನ್ನಾಭರಣ ಹಾಗೂ ನಗದು ಹಣ ದೋಚಿಕೊಂಡು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ತಾಲೂಕಿನ ಕಾತೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಲಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಇಡೀ ಮುಂಡಗೋಡ ತಾಲೂಕಿನಲ್ಲಿ ಆತಂಕ ಮೂಡಿಸಿದೆ.
ಆಲಳ್ಳಿ ಗ್ರಾಮದ ಕಮಲವ್ವ ತಿರುಕಪ್ಪ ಆಡೂರ (75) ಹತ್ಯೆಯಾದ ವೃದ್ಧೆ. ಇವರಿಗೆ ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ವೃದ್ಧೆಯ ಮನೆಯ ಪಕ್ಕದಲ್ಲೇ ಒಬ್ಬ ಮಗನ ಮನೆ ಇದ್ದು, ಘಟನೆ ನಡೆದ ಸಂದರ್ಭದಲ್ಲಿ ಮಗ ಹಾಗೂ ಸೊಸೆ ಊರಿಗೆ ತೆರಳಿದ್ದರು ಎನ್ನಲಾಗಿದೆ. ಮತ್ತೊಬ್ಬ ಮಗ ಚಿತ್ರದುರ್ಗದಲ್ಲಿ ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ವೃದ್ಧೆ ಮನೆಯಲ್ಲಿ ಒಂಟಿಯಾಗಿರುವುದನ್ನು ಗಮನಿಸಿದ ದುಷ್ಕರ್ಮಿಗಳು ರಾತ್ರಿ ವೇಳೆ ಮನೆಗೆ ನುಗ್ಗಿ ಹ*ತ್ಯೆಗೈದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಹ*ತ್ಯೆಯ ಬಳಿಕ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.70 ಲಕ್ಷ ರೂ. ನಗದನ್ನು ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಹಾನಾಪುರ ಹಾಗೂ ಪಿಎಸ್ಐ ಮಂಜುನಾಥ ಗೌಡರ ನೇತೃತ್ವದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕಾರವಾರದಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು, ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಕಾರ್ಯ ನಡೆಸಲಾಯಿತು.
ಶ್ವಾನದಳವು ವೃದ್ಧೆಯ ಮನೆಯ ಸುತ್ತಮುತ್ತ ಹಾಗೂ ಮನೆಯ ಹಿಂಭಾಗದ ಓಣಿಯಲ್ಲಿ ಶೋಧ ನಡೆಸಿ ಬಳಿಕ ಮರಳಿದೆ ಎನ್ನಲಾಗಿದೆ. ವೃದ್ಧೆಯ ಹತ್ಯೆಯ ಹಿಂದಿನ ಕಾರಣ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
