ಅಂಕೋಲಾ: ತಾಲೂಕಿನ ಗಾಬಿತಕೇಣಿಯಲ್ಲಿ ನಡೆದ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ದಲಿತ ಮಹಿಳೆಯೊಬ್ಬರಿಗೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಐವರ ವಿರುದ್ಧ ಉತ್ತರ ಕನ್ನಡ ಜಿಲ್ಲಾ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ ತಾಲೂಕಿನ ಗೌರಮ್ಮ ಯಲ್ಲಪ್ಪ ವಡ್ಡರ್ (34) ದೂರು ನೀಡಿದ ಮಹಿಳೆಯಾಗಿದ್ದು, ಗಾಬಿತಕೇಣಿಯ ಗಣಪತಿ ಕಾಶಿನಾಥ ಜೋಶಿ, ಸರಸ್ವತಿ ಗಣಪತಿ ಜೋಶಿ, ಸತೀಶ ಗಣಪತಿ ಜೋಶಿ, ಸವಿತಾ ಪಂಡರಿನಾಥ ಕುರ್ಲೆ ಹಾಗೂ ಪಂಡರಿನಾಥ ಮಹಾಬಲೇಶ್ವರ ಕುರ್ಲೆ ಆರೋಪಿಗಳಾಗಿದ್ದಾರೆ.
ದೂರಿನ ಪ್ರಕಾರ, ಗೌರಮ್ಮ ಅವರ ಸಾಹುಕಾರರಾದ ಜೈವಿಠಲ ಕುಬಾಲ್ ಅವರು ಅಂಕೋಲಾ ತಾಲೂಕಿನ ಗಾಬಿತಕೇಣಿಯಲ್ಲಿರುವ ಜಾಗವನ್ನು ಜೆಸಿಬಿ ಮೂಲಕ ಸಮತಟ್ಟು ಮಾಡುವಂತೆ ಸೂಚಿಸಿದ್ದರು. ಅದರಂತೆ ಸ್ಥಳಕ್ಕೆ ತೆರಳಿದ್ದ ಗೌರಮ್ಮ ಅವರು ಜಾಗದಲ್ಲಿದ್ದ ಗಿಡಗಂಟೆಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿದ್ದಾಗ, ಆರೋಪಿಗಳು ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯವಾಗಿ ನಿಂದಿಸಿ, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಜಿಲ್ಲಾ ಡಿಸಿಆರ್ಇ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಗಳು ತನಿಖೆಯಿಂದ ದೃಢಪಡಬೇಕಿದೆ.
