ಕಾರವಾರ:ಸರ್ಕಾರದ ನಿಯಮಗಳ ಪ್ರಕಾರ 15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರಾಪ್ (ಗುಜರಿ) ಮಾಡಬೇಕಾಗಿದ್ದರೂ, ಜಿಲ್ಲಾ ಕಾರಾಗೃಹ ಇಲಾಖೆ ಅಧಿಕಾರಿಗಳು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಹಳೆಯ ವಾಹನವನ್ನೇ ಅನಧಿಕೃತವಾಗಿ ಬಳಸುತ್ತಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾ ಕಾರಾಗೃಹಕ್ಕೆ ಈಗಾಗಲೇ ಹೊಸ ವಾಹನ ಮಂಜೂರಾಗಿದ್ದರೂ ಸಹ, ಅಧಿಕಾರಿಗಳು ಅದನ್ನು ಬಿಟ್ಟು 15 ವರ್ಷ 3 ತಿಂಗಳು ಕಳೆದಿರುವ ಹಳೆಯ ವಾಹನವನ್ನೇ ಬಳಕೆ ಮಾಡುತ್ತಿದ್ದರು.

ಈ ಕಾನೂನು ಬಾಹಿರ ನಡವಳಿಕೆಯ ಕುರಿತು ಜನಶಕ್ತಿ ವೇದಿಕೆಯು ಸಾರಿಗೆ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿತ್ತು. ದೂರಿನ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸ್ ಅಧಿಕಾರಿಗಳು, ಜೈಲ್ ಸೂಪರಿಟೆಂಡೆಂಟ್ ಅವರು ಅದೇ ಹಳೆಯ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ತಡೆದು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಸೂಪರಿಟೆಂಡೆಂಟ್ ಹೇಮಾವತಿ ಅವರು ಸ್ಥಳದಲ್ಲಿ ಉಳಿಯದೆ, ಸಿಬ್ಬಂದಿಯೊಬ್ಬರ ಬೈಕ್ ಹತ್ತಿ ಅಲ್ಲಿಂದ ತೆರಳಿದ್ದಾರೆ. ಸರ್ಕಾರಿ ನಿಯಮಗಳನ್ನು ಸಾರ್ವಜನಿಕರಿಗೆ ಕಡ್ಡಾಯಗೊಳಿಸುವ ಅಧಿಕಾರಿಗಳೇ ತಮಗೊಂದು ನ್ಯಾಯ, ಜನರಿಗೊಂದು ನ್ಯಾಯ ಎಂಬಂತೆ ವರ್ತಿಸುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ್ ನೀಡಿದ ದೂರಿನ ಮೇರೆಗೆ ಸಂಚಾರಿ ಇಲಾಖೆ ಅಧಿಕಾರಿಗಳು ಈ ಕ್ರಮ ಜರುಗಿಸಿದ್ದು, ಕಾರ್ಯಾಚರಣೆಯ ಸಂದರ್ಭದಲ್ಲಿ ವೇದಿಕೆಯ ಪ್ರಮುಖರಾದ ರಾಮಾ ನಾಯ್ಕ, ಬಾಬು ಶೇಖ್ ಹಾಗೂ ಸೂರಜ್ ಕುರುಮಕರ್ ಉಪಸ್ಥಿತರಿದ್ದರು.
