ಕಾರವಾರದ ಜೈದುರ್ಗಾ ಮಾತಾ ಸೌಹಾರ್ದ ಸಹಕಾರಿಯಲ್ಲಿ ನಡೆದ ₹57 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶನಿವಾರ ನೂರಾರು ವಂಚಿತ ಗ್ರಾಹಕರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಸುಮಾರು 6 ಸಾವಿರ ಗ್ರಾಹಕರಿಗೆ ವಂಚಿಸಿ ಪರಾರಿಯಾಗಿರುವ ಸಹಕಾರಿಯ ನಿರ್ದೇಶಕ ಲಿಂಗರಾಜ ಪುತ್ತು ಕಲ್ಗುಟಕರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ವರ್ಷ ಕಳೆದರೂ ಸಿಐಡಿ ವಿಶೇಷ ಘಟಕ ಹಾಗೂ ಬೆಂಗಳೂರು ಆರ್ಥಿಕ ಅಪರಾಧ ವಿಭಾಗವು ಇನ್ನೂ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣದ ತ್ವರಿತ ತನಿಖೆಗಾಗಿ ಕಾರವಾರ ಸಹಾಯಕ ಆಯುಕ್ತರನ್ನು ನೇಮಿಸಲಾಗಿದ್ದರೂ, ಒಟ್ಟಾರೆ ತನಿಖೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಇಲಾಖೆಗಳು ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ತಕ್ಷಣ ಸರ್ಕಾರ ಮಧ್ಯಪ್ರವೇಶಿಸಿ ತನಿಖೆಯನ್ನು ಚುರುಕುಗೊಳಿಸಿ ತಮ್ಮ ಹಣವನ್ನು ಮರಳಿ ಕೊಡಿಸದಿದ್ದರೆ, ಬರುವ ಜುಲೈ 15, 2026 ರಂದು ಬೆಂಗಳೂರಿನ ವಿಧಾನಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೋರಾಟ ಸಮಿತಿಯ ಪ್ರಮುಖರ ನೇತೃತ್ವದಲ್ಲಿ ವಂಚಿತ ಗ್ರಾಹಕರು ಎಚ್ಚರಿಕೆ ನೀಡಿದ್ದಾರೆ.
