ಕಾರವಾರ: ಹಳಿಯಾಳದಲ್ಲಿ ಖಾಕಿ ಪಡೆಗೇ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದ ಕುಖ್ಯಾತ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ ‘ಮಚ್ಚ ಮಂಜ’ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಜಗಾಂವ್ ಬಳಿ ಸಿನೆಮಾ ಶೈಲಿಯಲ್ಲಿ ಜಂಟಿ ಕಾರ್ಯಾಚರಣೆ ನಡೆಸಿರುವ ಉತ್ತರ ಕನ್ನಡ ಪೊಲೀಸರು, ಆರೋಪಿಯನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಸದ್ಯ ಹಳಿಯಾಳ ನ್ಯಾಯಾಧೀಶರ ಎದುರು ಹಾಜರುಪಡಿಸಲಾದ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಹಳಿಯಾಳದ ಮೌರ್ಯ ಬಾರ್ ಎದುರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದ ‘ಮಚ್ಚ ಮಂಜ’ನ ವಿಡಿಯೋ ಇಡೀ ರಾಜ್ಯಾದ್ಯಂತ ತೀವ್ರ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹಳಿಯಾಳದ ಪಿಎಸ್‌ಐ ಒಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದ್ದಲ್ಲದೆ, ಅಲ್ಲಿನ ಎಂಟು ಜನ ಸಿಬ್ಬಂದಿಗಳನ್ನು ಭಟ್ಕಳ ಹಾಗೂ ಮುರುಡೇಶ್ವರ ಠಾಣೆಗಳಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದರು.
ಖಾಕಿ ಪಡೆಗೆ ಸವಾಲು ಹಾಕಿ ತಲೆಮರೆಸಿಕೊಂಡಿದ್ದ ಮಂಜ, ಪೊಲೀಸರಿಗೆ ತನ್ನ ಸುಳಿವು ಸಿಗಬಾರದೆಂಬ ಕಾರಣಕ್ಕೆ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಆದರೆ, ಚಾಣಾಕ್ಷ ಪೊಲೀಸರು ಆತ ಬಳಸುತ್ತಿದ್ದ ಇತರೆ ಪರ್ಯಾಯ ಲಿಂಕ್ ಹಾಗೂ ನೆಟ್‌ವರ್ಕ್ ಜಾಡು ಹಿಡಿದು ರವಿವಾರ ಮಹಾರಾಷ್ಟ್ರದಲ್ಲಿ ಆತನನ್ನು ಸುತ್ತುವರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಮಂಜನ ವಿರುದ್ಧ ಸೆಕ್ಷನ್ 115, 118, 324(4), 352, ಮತ್ತು 351(2) ಅಡಿಯಲ್ಲಿ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಖೆಡ್ಡಾ ಆಪರೇಷನ್ ಹಳಿಯಾಳ ಸಿಪಿಐ ಜೈಪಾಲ್ ಪಾಟೀಲ್ ಅವರ ನೇತೃತ್ವದಲ್ಲಿ ನಡೆದಿದ್ದು, ದಾಂಡೇಲಿ ಪಿಎಸ್ಐ ಕೃಷ್ಣಗೌಡ ಅರಕೇರಿ, ಮಹಾಂತೇಶ್ ನಾಯ್ಕ್, ಕಿರಣ್ ಪಾಟೀಲ್ ಹಾಗೂ ಹಳಿಯಾಳ, ದಾಂಡೇಲಿ ಮತ್ತು ರಾಮನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎಂ.ಎಂ. ಮುಲ್ಲಾ, ಕೃಷ್ಣ, ಚಂದ್ರು, ಶಫಿ, ಬಸವರಾಜ ತೇಲಸಂಗ, ಗಂಗಾಧರ್, ನಿಂಗಪ್ಪ ಬಳ್ಳಾರಿ, ಸೊಹೇಲ್, ಬಸವರಾಜು ತ್ಯಾಪಿ, ಶ್ರೀಶೈಲ ಮತ್ತು ಬಸವರಾಜ ಹಗರಿ ಅವರನ್ನೊಳಗೊಂಡ ವಿಶೇಷ ತಂಡ ಈ ಮಾಜಿ ರೌಡಿಯ ಅಟಾಟೋಪಕ್ಕೆ ಯಶಸ್ವಿ ಕ್ಲೈಮ್ಯಾಕ್ಸ್ ಹಾಡಿದೆ.
