ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

International

ಜಪಾನ ದೇಶದಲ್ಲಿ ಕನ್ನಡ ಕಂಪು ಹರಡಿದ ಆಕಾಶ್!  

Pakka News Web • 22 ಜೂನ್ 2026,

ಕಾರವಾರ:ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಓದಿದ ಗ್ರಾಮೀಣ ಪ್ರತಿಭೆಯೊಂದು ಜಾಗತಿಕ ತಂತ್ರಜ್ಞಾನದ ರಾಜಧಾನಿ ಎನಿಸಿಕೊಂಡಿರುವ ಜಪಾನ್ ದೇಶದ ಆಹ್ವಾನದ ಮೇರೆಗೆ ಅಲ್ಲಿಗೆ ಹಾರಿ ಇತಿಹಾಸ ನಿರ್ಮಿಸಿದೆ. ಪ್ರತಿಭೆಗೆ ಭಾಷೆ, ಬಡತನ ಅಥವಾ ಹಿನ್ನೆಲೆಯ ಬೇಲಿಗಳಿಲ್ಲ ಎಂಬುದನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಮ್ಮೆಯ ಹುಡುಗ ಆಕಾಶ್ ಹರಿಕಂತ್ರ ಅಕ್ಷರಶಃ ಸಾಬೀತುಪಡಿಸಿದ್ದಾರೆ. ಜಪಾನ್ ಸರ್ಕಾರದ ಪ್ರತಿಷ್ಠಿತ ‘ಸಕುರಾ ಸ್ಟೂಡೆಂಟ್ ಎಕ್ಸ್ಚೇಂಜ್ ಪ್ರೋಗ್ರಾಂ’ ಅಡಿಯಲ್ಲಿ ಆಯ್ಕೆಯಾದ ಆಕಾಶ್, ಉದಯಿಸುವ ಸೂರ್ಯನ ನಾಡಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅದ್ಭುತ ಲೋಕವನ್ನು ಅನ್ವೇಷಿಸಿ ಮರಳಿದ್ದು, ಇಡೀ ರಾಜ್ಯದ ಸರ್ಕಾರಿ ಶಾಲೆಗಳ ಕೋಟ್ಯಂತರ ವಿದ್ಯಾರ್ಥಿಗಳಿಗೆ ಹೊಸ ಭರವಸೆಯ ದಾರಿದೀಪವಾಗಿದ್ದಾರೆ.

ಪ್ರಸ್ತುತ ಕುಮಟಾ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿರುವ ಆಕಾಶ್ ಅವರ ಶೈಕ್ಷಣಿಕ ಪಯಣ ಅತ್ಯಂತ ಸ್ಪೂರ್ತಿದಾಯಕ. ಒಂದರಿಂದ ಏಳನೇ ತರಗತಿಯನ್ನು ಕೊಡ್ಕಣಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಎಂಟರಿಂದ ಹತ್ತನೇ ತರಗತಿಯನ್ನು ಬರ್ಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲೇ ಮುಗಿಸಿದ ಈ ಸಾಧಕ, ಎಂಟನೇ ತರಗತಿಯಲ್ಲಿದ್ದಾಗಲೇ ರಾಷ್ಟ್ರೀಯ ಮಟ್ಟದ NMMS ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ 621 ಅಂಕಗಳನ್ನು ಬಾಚಿಕೊಳ್ಳುವ ಮೂಲಕ ತಮ್ಮ ಅಪ್ರತಿಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದರು. ಇವರ ಇದೇ ನಿರಂತರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿದ ಜಪಾನ್ ಸರ್ಕಾರ, ಇಡೀ ಕರ್ನಾಟಕದಿಂದ ಆಯ್ಕೆಯಾದ ಕೇವಲ ನಾಲ್ಕು ವಿದ್ಯಾರ್ಥಿಗಳಲ್ಲಿ ಒಬ್ಬರನ್ನಾಗಿ ಆಕಾಶ್ ಅವರನ್ನು ಹೆಮ್ಮೆಯಿಂದ ಬರಮಾಡಿಕೊಂಡಿತು. ಮೇ 23 ರಿಂದ 30 ರವರೆಗೆ ನಡೆದ ಈ ಪ್ರತಿಷ್ಠಿತ ಶೈಕ್ಷಣಿಕ ಪ್ರವಾಸದ ವೀಸಾ ವ್ಯವಸ್ಥೆ, ವಿಮಾನ ಪ್ರಯಾಣ, ಹೋಟೆಲ್ ವಸತಿ ಸೇರಿದಂತೆ ಸಂಪೂರ್ಣ ವೆಚ್ಚವನ್ನು ಜಪಾನ್ ಸರ್ಕಾರವೇ ಹೊತ್ತುಕೊಂಡಿತ್ತು.

ಅಂತರರಾಷ್ಟ್ರೀಯ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮವಾದ ಈ ಪ್ರವಾಸದ ಮುಖ್ಯ ಉದ್ದೇಶ ಯುವಮನಸ್ಸುಗಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬಿತ್ತುವುದಾಗಿತ್ತು. ಪ್ರವಾಸದ ಅವಧಿಯಲ್ಲಿ ಆಕಾಶ್ ಅವರಿಗೆ ಜಪಾನ್‌ನ ಪ್ರಸಿದ್ಧ ವಿಶ್ವವಿದ್ಯಾಲಯಗಳು, ಅತ್ಯಾಧುನಿಕ ಬಾಹ್ಯಾಕಾಶ ಸಂಶೋಧನಾ ಕೇಂದ್ರ (Space Center) ಹಾಗೂ ವಿಶ್ವವಿಖ್ಯಾತ ಸಂಶೋಧನಾ ಸಂಸ್ಥೆಗಳಾದ ‘ರಿಕೆನ್’ ಮತ್ತು ‘ಮಿರಾಕನ್’ಗಳ ಒಳಹೊಕ್ಕು ನೋಡುವ ಅಪರೂಪದ ಅವಕಾಶ ಸಿಕ್ಕಿತು. ಅಲ್ಲಿನ ವಿಜ್ಞಾನಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಭವಿಷ್ಯದ ದೈತ್ಯ ತಂತ್ರಜ್ಞಾನವಾದ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ನಡೆಸುತ್ತಿರುವ ಜಾಗತಿಕ ಮಟ್ಟದ ಅದ್ಭುತ ಪ್ರಯೋಗಗಳನ್ನು ಆಕಾಶ್ ಕಣ್ಣಾರೆ ಕಂಡು ಬೆರಗಾದರು.

ಆದರೆ, ಈ ಪ್ರವಾಸ ಕೇವಲ ವಿಜ್ಞಾನಕ್ಕಷ್ಟೇ ಸೀಮಿತವಾಗಿರಲಿಲ್ಲ. ಆಧುನಿಕತೆಯ ತುತ್ತತುದಿಯಲ್ಲಿದ್ದರೂ ಜಪಾನಿಯರು ತಮ್ಮ ಭವ್ಯ ಪರಂಪರೆ, ಶಿಸ್ತು ಮತ್ತು ಸಂಸ್ಕೃತಿಯನ್ನು ಹೇಗೆ ಉಸಿರಾಗಿಸಿಕೊಂಡಿದ್ದಾರೆ ಎಂಬುದನ್ನು ಆಕಾಶ್ ಅಲ್ಲಿನ ಶಾಲೆ ಹಾಗೂ ಐತಿಹಾಸಿಕ ದೇವಾಲಯಗಳಿಗೆ ಭೇಟಿ ನೀಡಿದಾಗ ಮನಗಂಡರು. ಸಾರ್ವಜನಿಕ ಸ್ಥಳಗಳಲ್ಲಿ ಕಸದ ಕಣವೂ ಕಾಣದಂತಹ ಸ್ವಚ್ಛತೆ, ಪ್ರತಿಯೊಂದು ಕೆಲಸವೂ ನಿಗದಿಪಡಿಸಿದ ಸೆಕೆಂಡುಗಳಲ್ಲೇ ಮುಗಿಯುವ ಸಮಯ ಪ್ರಜ್ಞೆ, ಪ್ರತಿಯೊಬ್ಬ ನಾಗರಿಕನೂ ಪಾಲಿಸುವ ಸ್ವಯಂ ನಿಯಂತ್ರಣ ಮತ್ತು ಅಪರಿಚಿತರನ್ನೂ ಪ್ರೀತಿಯಿಂದ ಸತ್ಕರಿಸುವ ಜಪಾನಿಯರ ಆತಿಥ್ಯ ಆಕಾಶ್ ಅವರ ಯೋಚನಾ ಲಹರಿಯನ್ನೇ ಬದಲಾಯಿಸಿದೆ.

ಜಪಾನ್ ದೇಶದ ಕಟ್ಟುನಿಟ್ಟಿನ ಶಿಸ್ತು, ಸಮಯ ಪ್ರಜ್ಞೆ ಹಾಗೂ ತಂತ್ರಜ್ಞಾನವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿರುವ ವಿಧಾನ ನನಗೆ ಹೊಸ ಲೋಕವನ್ನೇ ಪರಿಚಯಿಸಿದೆ. ಈ ಜಾಗತಿಕ ಅನುಭವವನ್ನು ನನ್ನ ಮುಂದಿನ ಉನ್ನತ ವಿದ್ಯಾಭ್ಯಾಸ ಹಾಗೂ ನನ್ನ ಭಾರತ ದೇಶದ ಪ್ರಗತಿಗಾಗಿ ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದು ಆಕಾಶ್ ಹರಿಕಂತ್ರ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಈ ಯುವ ವಿಜ್ಞಾನಿಯ ಸಾಧನೆ ಇಡೀ ರಾಜ್ಯಕ್ಕೆ ಹೆಮ್ಮೆಯ ತಂದಿದ್ದು, ಇಂತಹ ಅಂತರರಾಷ್ಟ್ರೀಯ ವಿನಿಮಯ ಕಾರ್ಯಕ್ರಮಗಳು ನಮ್ಮ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಜಾಗತಿಕ ಮಟ್ಟದ ವಿಶಾಲ ದೃಷ್ಟಿಕೋನವನ್ನು ಬೆಳೆಸಲು ಪ್ರಮುಖ ಮೈಲಿಗಲ್ಲಾಗಲಿವೆ ಎಂಬುದರಲ್ಲಿ ಸಂಶಯವಿಲ್ಲ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250