ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ಸ್ಥಳೀಯರಿಗೆ ಜಾಬ್ ನೀಡುವಲ್ಲಿ ಆದ್ಯತೆ ನೀಡದಿದ್ದರೆ ಉಗ್ರ ಹೋರಾಟ: ಅಧಿಕಾರಿಗಳ ಲಿಖಿತ ಭರವಸೆಗೆ ರಾಘು ನಾಯ್ಕ ಗಡುವು!

Pakka News Web • 22 ಜೂನ್ 2026,

ಕಾರವಾರ: ಕೈಗಾ ಎನ್‌ಪಿಸಿಎಲ್‌ನ 321 ಹುದ್ದೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಆದ್ಯತೆ ನೀಡಬೇಕು ಮತ್ತು ಹೊರ ಜಿಲ್ಲೆಗಳಲ್ಲಿ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಹಿಂದೆ ಕಾರವಾರದಿಂದ ಕೈಗಾವರೆಗೆ ನಡೆಸಲಾದ 56 ಕಿಲೋಮೀಟರ್ ಬೃಹತ್ ಪಾದಯಾತ್ರೆಯ ತೀವ್ರತೆಯಿಂದಾಗಿ ಎಚ್ಚೆತ್ತಿರುವ ಕೈಗಾ ಅಧಿಕಾರಿಗಳು, ಪ್ರತಿಭಟನಾಕಾರರ 10 ಪ್ರಮುಖ ಬೇಡಿಕೆಗಳ ಪೈಕಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಸಭೆಯಲ್ಲಿ ಲಿಖಿತ ಭರವಸೆ ನೀಡಿದ್ದಾರೆ. ಒಂದು ವೇಳೆ ಈ ಭರವಸೆಗಳು ಕೇವಲ ಕಾಗದಕ್ಕಷ್ಟೇ ಸೀಮಿತವಾಗಿ, ಮುಂಬರುವ ನೇಮಕಾತಿಯಲ್ಲಿ ಸ್ಥಳೀಯ ಬಡ ಯುವಕರಿಗೆ ವಂಚನೆಯಾದರೆ ಯಾವುದೇ ಕ್ಷಣದಲ್ಲಾದರೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಪ್ರಸ್ತುತ ಕೈಗಾದಲ್ಲಿ ಕೇವಲ ಶೇ 60 ರಷ್ಟು ಮಾತ್ರ ನಮ್ಮವರಿದ್ದು, ಭವಿಷ್ಯದ 5 ಮತ್ತು 6 ನೇ ಘಟಕಗಳ ಉದ್ಯೋಗಾವಕಾಶಗಳಲ್ಲಿ ಶೇ 75 ರಷ್ಟನ್ನು ಕಡ್ಡಾಯವಾಗಿ ಸ್ಥಳೀಯರಿಗೇ ನೀಡಲು ಅಧಿಕಾರಿಗಳ ಸಮ್ಮತಿ ಪಡೆಯಲಾಗಿದೆ ಎಂದು ರಾಘು ನಾಯ್ಕ ವಿವರಿಸಿದರು. ಇದರೊಂದಿಗೆ ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಸಿಎಸ್‌ಆರ್ ನಿಧಿಯಡಿ 103 ಶಾಲೆಗಳ ದತ್ತು, ಮಲ್ಲಾಪುರ–ಕೆರವಡಿ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ.ಗಳ ಟೆಂಡರ್ ಹಾಗೂ ಕಾರವಾರ ಕ್ರಿಮ್ಸ್ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ಮತ್ತು ವೆಂಟಿಲೇಟರ್ ಆಂಬುಲೆನ್ಸ್ ಒದಗಿಸಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ, ಸ್ಥಳೀಯರ ಭವಿಷ್ಯದ ದೃಷ್ಟಿಯಿಂದ ಇಷ್ಟೆಲ್ಲಾ ದೊಡ್ಡ ಹೋರಾಟ ನಡೆಯುತ್ತಿದ್ದರೂ, ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈವರೆಗೆ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸದಿರುವ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖ ಮುಖಂಡರಾದ ಎಚ್.ಎಫ್. ದೊಡ್ಡಣ್ಣನವರ್, ಶಂಕರ ಗುನಗಿ, ಉದಯ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250