ಕುಮಟಾ:ಹಸಿವು… ಅದು ಬಡವ-ಬಲ್ಲಿದ ಎನ್ನದೆ ಎಲ್ಲರನ್ನೂ ಕಾಡುವ ಜಠರಾಗ್ನಿ. ಆದರೆ, ಅದೇ ಹಸಿವಿನ ಬೇಗೆಯನ್ನು ತಣಿಸಿಕೊಳ್ಳಲು ಹೋದ ಅಲೆಮಾರಿ ವೃದ್ಧ ದಂಪತಿಗೆ ಸಿಕ್ಕಿದ್ದು ಅನ್ನದ ಮುದ್ದೆಯಲ್ಲ, ಬದಲಿಗೆ ರಕ್ತಸಿಕ್ತ ಮುಷ್ಟಿಘಾತ! ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ಇರುವ ಗೋವರ್ಧನ್ ಹೋಟೆಲ್ ಮಾನವೀಯತೆ ಮರೆತು ಕ್ರೌರ್ಯದ ಕೇಂದ್ರವಾಗಿ ಬದಲಾದ ಘಟನೆಯಿದು. ನಾವು ಭಿಕ್ಷೆ ಬೇಡುತ್ತಿಲ್ಲ, ಹಣ ಕೊಡುತ್ತೇವೆ ಊಟ ಕೊಡಿ ಎಂದು ಹಸಿದ ಹೊಟ್ಟೆಯ ಆಸರೆಗಾಗಿ ಅಂಗಲಾಚಿದ ವೃದ್ಧ ಜೀವಗಳ ಮೇಲೆ ಹೋಟೆಲ್ ಮಾಲೀಕ ಮತ್ತು ವಾಚ್‌ಮನ್ ಜಂಟಿಯಾಗಿ ನಡೆಸಿದ ಅಮಾನವೀಯ ಹಲ್ಲೆ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ.
ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದೇವಿಕೆರೆ ಗ್ರಾಮದವರಾದ ರಮೇಶ ದ್ಯಾಮಣ್ಣ ಅಲೆಮಾರಿ (62) ಹಾಗೂ ಅವರ ಪತ್ನಿ ದ್ಯಾಮವ್ವ (51) ಸ್ವಂತ ಸೂರಿಲ್ಲದೆ ಬದುಕು ಸಾಗಿಸುತ್ತಿರುವ ದುರ್ದೈವಿಗಳು. ಘಟನೆಯ ದಿನ ಮಧ್ಯಾಹ್ನ ತೀವ್ರ ಹಸಿವಿನಿಂದ ಕಂಗಾಲಾಗಿದ್ದ ಈ ದಂಪತಿ ಗೋವರ್ಧನ್ ಹೋಟೆಲ್‌ನ ಮೆಟ್ಟಿಲೇರಿದ್ದರು. ಆದರೆ, ಅವರ ಕೊಳಕಾದ ಬಟ್ಟೆಗಳನ್ನು ಕಂಡು ಸಿಡಿದೆದ್ದ ಹೋಟೆಲ್ ಮಾಲೀಕ ಗಣೇಶ ನಾಯ್ಕ, ಅನ್ನ ನೀಡುವ ಬದಲಿಗೆ ಅವಾಚ್ಯ ಶಬ್ದಗಳ ನಿಂದನೆಯ ಸುರಿಮಳೆಗರೆದಿದ್ದಾನೆ. ಅಷ್ಟಕ್ಕೆ ನಿಲ್ಲದೆ, ವೃದ್ಧರು ಮತ್ತೆ ಹಸಿವಿನಿಂದ ಬೇಡಿಕೊಂಡಾಗ ಮಾಲೀಕ ಹಾಗೂ ಅಲ್ಲಿನ ವಾಚ್‌ಮನ್ ಗಣೇಶ ಗುರಕಾ ಇಬ್ಬರೂ ಸೇರಿ ದಂಪತಿಯನ್ನು ಕ್ರೂರವಾಗಿ ಹೊರಕ್ಕೆ ನೂಕಿ, ಮನಬಂದಂತೆ ಒದ್ದು ದೌರ್ಜನ್ಯ ಎಸಗಿದ್ದಾರೆ. ಹಲ್ಲೆಯ ತೀವ್ರತೆಗೆ ತಲೆಗೆ ಗಂಭೀರ ಪೆಟ್ಟಾಗಿ ರಮೇಶ ಅವರು ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಅವರ ಪತ್ನಿ ದ್ಯಾಮವ್ವ ಕೂಡ ಗಾಯಗೊಂಡು ಅಸ್ವಸ್ಥರಾಗಿದ್ದಾರೆ.
ಬಾಳೆ ಎಲೆಯಲ್ಲೋ, ಕಾಗದದ ಮೇಲೋ ನಾಲ್ಕು ತುತ್ತು ಅನ್ನ ನೀಡದಿದ್ದರೂ ಪರವಾಗಿಲ್ಲ, ಮನುಷ್ಯರನ್ನೇ ಇಷ್ಟು ಕಲ್ಲು ಹೃದಯದಿಂದ ನಡೆಸಿಕೊಳ್ಳಬೇಕೇ ಎಂದು ಸ್ಥಳೀಯರು ಮತ್ತು ಸಾರ್ವಜನಿಕರು ಹೋಟೆಲ್ ಮಾಲೀಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಗಂಭೀರತೆ ಅರಿತು ತಕ್ಷಣ ಕಾರ್ಯಪ್ರವೃತ್ತರಾದ ಕುಮಟಾ ಪೊಲೀಸರು, ರಸ್ತೆ ಬದಿಯಲ್ಲಿ ನರಳುತ್ತಿದ್ದ ದಂಪತಿಯನ್ನು ರಕ್ಷಿಸಿ ಕುಮಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಸದ್ಯ ಸಂತ್ರಸ್ತರ ಹೇಳಿಕೆ ಪಡೆದುಕೊಂಡಿರುವ ಪೊಲೀಸರು, ಕ್ರೂರತ್ವ ಮೆರೆದ ಹೋಟೆಲ್ ಮಾಲೀಕ ಗಣೇಶ ನಾಯ್ಕ ಹಾಗೂ ವಾಚ್‌ಮನ್ ಗಣೇಶನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಹಸಿವಿನ ಕೂಗಿಗೆ ಹಿಂಸೆಯ ಉತ್ತರ ನೀಡಿದ ಆರೋಪಿಗಳಿಗೆ ಕಾನೂನಿನ ತಕ್ಕ ಶಿಕ್ಷೆಯಾಗಲಿ ಎಂಬುದೇ ಸಾರ್ವಜನಿಕರ ಆಗ್ರಹವಾಗಿದೆ.
