ಕಾರವಾರ ತಾಲೂಕಿನ ಮಾಜಾಳಿಯ ಬ್ರಾಹ್ಮಣವಾಡಾದಲ್ಲಿ ಮಳೆ-ಗಾಳಿಗೆ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಗುರುವಾರ ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಇದರಿಂದಾಗಿ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮರ ಧರೆಗುರುಳಿದೆ ಎನ್ನಲಾಗಿದೆ.

ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಜೂನ್ 29ರವರೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದ್ದು, ಸಾರ್ವಜನಿಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಜಾಗರೂಕರಾಗಿರುವಂತೆ ಜಿಲ್ಲಾಡಳಿತ ಸಹ ಸೂಚಿಸಿದೆ.
