ಕಾರವಾರ:ಜಿಲ್ಲೆಯ ನಾಡು ಮಾಸ್ಕೇರಿ ಗ್ರಾಮ ಪಂಚಾಯತ್ ಹಾಗೂ ಗೋಕರ್ಣ ವ್ಯಾಪ್ತಿಯ ಗಂಗೇಕೊಳ್ಳದ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರ ನೀಡಬೇಕು ಎಂದು ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಜಿ. ಯಲಕಪಾಟಿ ಅವರು ಜಿಲ್ಲಾಧಿಕಾರಿಗಳಿಗೆ ವಿನಂತಿಸಿದ್ದಾರೆ. ಗಂಗೇಕೊಳ್ಳ ಪ್ರದೇಶದಲ್ಲಿ ಸುಮಾರು 45 ಕುಟುಂಬಗಳು ಕಳೆದ 35 ರಿಂದ 40 ವರ್ಷಗಳಿಂದ ವಾಸಿಸುತ್ತಿದ್ದರೂ, ಅವರಿಗೆ ಇಂದಿಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಸರ್ಕಾರದ ದಾಖಲೆಗಳ ಪ್ರಕಾರ ಉತ್ತರ ಕನ್ನಡ ಜಿಲ್ಲೆಯು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದ ಜಿಲ್ಲೆಯಾಗಿದ್ದರೂ, ಈ ಭಾಗದ ಜನರು ಮಾತ್ರ ಇಂದಿಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ನಮ್ಮನ್ನು ಇಂದಿಗೂ ಕಡೆಗಣಿಸಲ್ಪಟ್ಟವರಂತೆ ನೋಡಲಾಗುತ್ತಿದ್ದು, ಈ ಪ್ರದೇಶದಲ್ಲಿ ಯಾವುದೇ ಸಮರ್ಪಕ ಅಭಿವೃದ್ಧಿ ನಡೆದಿಲ್ಲ ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
16 ಕುಟುಂಬಗಳ ಅತಿಕ್ರಮಣ ಸಕ್ರಮಕ್ಕೆ ಆಗ್ರಹ:ಗಂಗೇಕೊಳ್ಳದ ನಿವಾಸಿಗಳು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ವಿದ್ಯುತ್ ಬಿಲ್ ಸೇರಿದಂತೆ ಎಲ್ಲಾ ಅಗತ್ಯ ಸರ್ಕಾರಿ ದಾಖಲೆಗಳನ್ನು ಹೊಂದಿದ್ದಾರೆ. ಈ ಹಿಂದೆ ಇಲ್ಲಿನ 26 ಮನೆಗಳಿಗೆ ಮಾತ್ರ ಅತಿಕ್ರಮಣ ಸಕ್ರಮಗೊಳಿಸಿ ಆರ್ಟಿಸಿ ದಾಖಲಾತಿ ಹಾಗೂ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ, ಅದೇ ಭಾಗದಲ್ಲಿ ವಾಸಿಸುತ್ತಿರುವ ಉಳಿದ 16 ಮನೆಗಳಿಗೆ ಇದುವರೆಗೆ ಯಾವುದೇ ಸಕ್ರಮದ ಕಾರ್ಯವೂ ಆಗಿಲ್ಲ ಮತ್ತು ಹಕ್ಕುಪತ್ರಗಳನ್ನೂ ನೀಡಿಲ್ಲ ಎನ್ನುವುದನ್ನು ಯಲಕಪಾಟಿ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ; ನ್ಯಾಯಕ್ಕಾಗಿ ಒತ್ತಾಯ:ಈ ಮನವಿಯನ್ನು ಸಹಾನುಭೂತಿಯಿಂದ ಪರಿಗಣಿಸಿ, ಬಾಕಿ ಉಳಿದಿರುವ 16 ಕುಟುಂಬಗಳ ಅತಿಕ್ರಮಣವನ್ನು ತಕ್ಷಣವೇ ಸಕ್ರಮಗೊಳಿಸಿ ಹಕ್ಕುಪತ್ರಗಳನ್ನು ಮಂಜೂರು ಮಾಡಬೇಕು. ಹಾಗೆಯೇ ಈ ಪ್ರದೇಶಕ್ಕೆ ಅಗತ್ಯವಿರುವ ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ತುರ್ತಾಗಿ ಒದಗಿಸಿ ನಮಗೆ ನ್ಯಾಯ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು. ಪ್ರಗತಿಪರ ರಾಜ್ಯ ದಲಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎಲಿಷಾ ಜಿ. ಯಲಕಪಾಟಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ನಾಗು ಕೆ., ಮೆಹಬೂಬ್ ಇನಾಮ್ದಾರ್, ರೂಪೇಶ್ ಗುನಗಿ, ವೀಣಾ ನಾಯ್ಕ, ನಾಗರಾಜ್ ಗೌಡ ಸೇರಿದಂತೆ ಗಂಗೇಕೊಳ್ಳದ ಹಲವು ನಿವಾಸಿಗಳು ಉಪಸ್ಥಿತರಿದ್ದರು.
