ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಕೋರ್ಟ್‌ನಿಂದ ಮಹತ್ವದ ತೀರ್ಪು

Pakka News Web • 2 ಜುಲೈ 2026,

ಕಾರವಾರ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಕಾರವಾರದ ನ್ಯಾಯಾಲಯ ಜುಲೈ 1 ಮಹತ್ವದ ತೀರ್ಪು ನೀಡಿದೆ. ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ಸೂರಬೈಲ್ ನಿವಾಸಿ, ಕೂಲಿ ಕಾರ್ಮಿಕನಾದ ಸಂತೋಷ ಪೆದ್ರು ಸಿದ್ದಿ ಅಲಿಯಾಸ್ ಮಂಡವಾಳಕರ (27) ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ಈತನ ವಿರುದ್ಧ 2022ರಲ್ಲಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆ ಹಾಗೂ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಯಲ್ಲಾಪುರ ಪೊಲೀಸ್ ನಿರೀಕ್ಷಕ ಸುರೇಶ್ ಎಚ್. ಯಳ್ಳೂರ ಅವರು ಆರೋಪಿತನನ್ನು ಬಂಧಿಸಿ, ಸೂಕ್ತ ಸಾಕ್ಷ್ಯಧಾರಗಳೊಂದಿಗೆ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಕಾರವಾರದ ತ್ವರಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪ್ರತಿಭಾ ಬಂಡುರಾವ್ ಕುಲಕರ್ಣಿ ಅವರು, ಆರೋಪಿಯ ಮೇಲಿನ ತಪ್ಪು ಸಾಕ್ಷಿ ಪುರಾವೆಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದ್ದಾರೆ. ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 1,00,000 ರೂಪಾಯಿ ದಂಡ ವಿಧಿಸಲಾಗಿದ್ದು, ದಂಡದ ಮೊತ್ತ ಪಾವತಿಸದಿದ್ದರೆ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇದರೊಂದಿಗೆ, ಸಂತ್ರಸ್ತ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ 4,00,000 ರೂಪಾಯಿಗಳ ಪರಿಹಾರ ನೀಡುವಂತೆಯೂ ಮಾನ್ಯ ನ್ಯಾಯಾಧೀಶರು ತೀರ್ಪಿನಲ್ಲಿ ಆದೇಶಿಸಿದ್ದಾರೆ.

ಸರ್ಕಾರದ ಪರವಾಗಿ ಕಾರವಾರದ ವಿಶೇಷ ಸರ್ಕಾರಿ ಅಭಿಯೋಜಕ  ಗುರುಶಾಂತಯ್ಯ ಕೆ. ಕುರ್ಡಿಕೇರಿ ಅವರು ನ್ಯಾಯಾಲಯದಲ್ಲಿ ಬಲವಾದ ವಾದ ಮಂಡಿಸಿ ಅಪರಾಧಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಮುಖ ಪ್ರಕರಣದ ತನಿಖೆಯಲ್ಲಿ ತನಿಖಾ ಸಹಾಯಕರಾಗಿ ಎಎಸ್‌ಐ ಮಂಜುನಾಥ ಮನ್ನಂಗಿ ಹಾಗೂ ಕೋರ್ಟ್ ಮಾನಿಟರಿಂಗ್ ಅಧಿಕಾರಿಯಾಗಿ ಯಲ್ಲಾಪುರ ಪಿಎಸ್‌ಐ ರಾಜಶೇಖರ ವಂದಲಿ ಕಾರ್ಯನಿರ್ವಹಿಸಿದ್ದರು. ವಿಚಾರಣೆಯ ಸಮಯದಲ್ಲಿ ಸಾಕ್ಷಿದಾರರನ್ನು ಸಕಾಲದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಲ್ಲಾಪುರ ಠಾಣೆಯ ಸಿಬ್ಬಂದಿಗಳಾದ ಎಎಸ್‌ಐ ಗಜಾನನ ನಾಯ್ಕ ಹಾಗೂ ಸಿಪಿಸಿ ವೀರೇಶ ಎಂ.ಎಚ್. ಶ್ರಮಿಸಿದ್ದಾರೆ ಎಂದು ಯಲ್ಲಾಪುರ ಪೊಲೀಸ್ ನಿರೀಕ್ಷಕರು ತಮ್ಮ ಪ್ರಕಟಣೆಯಲ್ಲಿ ಶ್ಲಾಘಿಸಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250