ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಡಗೋಡಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಇಂದೂರು ಗ್ರಾಮದ ನಿವಾಸಿಯಾದ ಕೂಲಿ ಕಾರ್ಮಿಕ ಮಂಜುನಾಥ ಯಲ್ಲಪ್ಪ ವಾಲಿಕಾರ (25) ಎಂಬಾತನೇ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದಾನೆ. ಮುಂಡಗೋಡ ತಾಲೂಕಿನ ಸಾಲಗಾಂವ ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಮೂಲಗಳ ಪ್ರಕಾರ, ಆರೋಪಿ ಮಂಜುನಾಥನಿಗೂ ಹಾಗೂ 17 ವರ್ಷ 1 ತಿಂಗಳ ಪ್ರಾಯದ ಅಪ್ರಾಪ್ತ ಬಾಲಕಿಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿತ್ತು. ಈ ಪರಿಚಯವನ್ನು ಬಳಸಿಕೊಂಡ ಆರೋಪಿಯು, ಜೂನ್ 14ರಂದು ಮಧ್ಯಾಹ್ನ ಸುಮಾರು 3:00 ಗಂಟೆಗೆ ಬಾಲಕಿಯನ್ನು ಮುಂಡಗೋಡ ಪಟ್ಟಣದ ಅರಣ್ಯ ಇಲಾಖೆಯ ಗಾರ್ಡನ್‌ಗೆ ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ.
ಇದಾದ ಬಳಿಕ ಜೂನ್ 2ರಂದು ಬಾಲಕಿಯನ್ನು ಆಕೆಯ ಮನೆಯಿಂದಲೇ ಅಪಹರಿಸಿದ ಆರೋಪಿಯು, ತನ್ನ ಮೋಟಾರ್ ಸೈಕಲ್ ಮೇಲೆ ಮುಂಡಗೋಡ ಬಸ್ ನಿಲ್ದಾಣಕ್ಕೆ ಕರೆತಂದಿದ್ದಾನೆ. ಅಲ್ಲಿಂದ ಹುಬ್ಬಳ್ಳಿ ಹಾಗೂ ಗೋವಾಕ್ಕೆ ಕರೆದೊಯ್ದು, ಗೋವಾದಲ್ಲಿಯೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜುಲೈ 5ರಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 134/2026, ಪೋಕ್ಸೊ ಕಾಯ್ದೆ-2012ರ ಕಲಂ 4, 6 ಹಾಗೂ ಬಿ.ಎನ್.ಎಸ್-2023ರ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ. ಮುಂಡಗೋಡ ಠಾಣೆಯ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, ಸದ್ಯ ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
