ದಾಂಡೇಲಿ ನಗರದ ಹಳಿಯಾಳ ರಸ್ತೆಯ 3ನೇ ಗೇಟ್ ಹತ್ತಿರದ ಮನೆಯೊಂದರಲ್ಲಿ 69 ವರ್ಷದ ವೃದ್ಧೆಯೊಬ್ಬರು ಸೋಮವಾರ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಮನೆಯ ಮೇಲ್ಚಾವಣಿಯ ನೇಣಿಗೆ ಶರಣಾಗಿದ್ದಾರೆ.
ಶಾಂತವ್ವಾ ಚಂದ್ರಪ್ಪ ಕಿಳ್ಳೀಕೇತರ ಎಂಬವರೇ ದುರಂತ ಅಂತ್ಯ ಕಂಡ ದುರ್ದೈವಿಯಾಗಿದ್ದು, ಮೇಲ್ನೋಟಕ್ಕೆ ಕೌಟುಂಬಿಕ ಕಲಹವೇ ಈ ತೀವ್ರ ನಿರ್ಧಾರಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಈ ಘಟನೆ ಸಾರ್ವಜನಿಕ ವಲಯದಲ್ಲಿ ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ವೃದ್ಧೆ ನೇಣಿಗೆ ಶರಣಾಗುವ ಆ ಕರಾಳ ಕ್ಷಣದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲವೇ ಅಥವಾ ಒಂದು ವೇಳೆ ಇದ್ದರೂ ಮನೆಯಲ್ಲಿದ್ದವರಿಗೆ ಯಾರಿಗೂ ಇದರ ಸುಳಿವೇ ಸಿಗಲಿಲ್ಲವೇ ಎಂಬ ಪ್ರಶ್ನೆಗಳು ಈಗ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಕೌಟುಂಬಿಕ ಕಲಹದ ಹಿಂದಿರುವ ಅಸಲಿ ಸತ್ಯವೇನು ಮತ್ತು ಈ ನಿಗೂಢ ಸಾವಿನ ಹಿಂದಿರುವ ರಹಸ್ಯವೇನು ಎಂಬ ಎಲ್ಲ ಪ್ರಶ್ನೆಗಳಿಗೆ ಪೊಲೀಸರ ತನಿಖೆಯಷ್ಟೇ ಈಗ ನಿಖರವಾದ ಉತ್ತರ ನೀಡಬೇಕಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪಿಎಸ್ಐ ಅಮೀನ್ ಅತ್ತಾರ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಸೂಕ್ಷ್ಮ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
