ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವೈಜ್ಞಾನಿಕತೆ ಹಾಗೂ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸ ಮತ್ತೊಂದು ಬಲಿ ಪಡೆದಿದೆ. ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರದ ಬಸ್ತಿ ಬಳಿ ನಡೆದಿದೆ. ಐಆರ್‌ಬಿ ಕಂಪನಿಯ ಬೇಜವಾಬ್ದಾರಿತನದ ಕಾಮಗಾರಿಯೇ ಈ ದಾರುಣ ಘಟನೆಗೆ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಸ್ಥಳದಲ್ಲಿ ತೀವ್ರ ಆಕ್ರೋಶದ ವಾತಾವರಣ ಸೃಷ್ಟಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತೆರ್ನಮಕ್ಕಿ ಸಬಾತಿ ನಿವಾಸಿ ಕೃಷ್ಣಾ ನಾಯ್ಕ ಎಂದು ಗುರುತಿಸಲಾಗಿದೆ. ಇವರು ಸಾರದಹೋಳೆ ನಾಮಧಾರಿ ಹೋಬಳಿಯ ಹಾಲಿ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ. ಮುರುಡೇಶ್ವರದ ಬಸ್ತಿ ಬಳಿ ಚಲಿಸುತ್ತಿದ್ದ ವೇಳೆ ಬೈಕ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಲಾರಿಯ ಹಿಂಬದಿಯ ಚಕ್ರದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಭವಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿ ವರ್ಷಗಳೇ ಕಳೆದರೂ ಇನ್ನು ಮುಕ್ತಾಯದ ಹಂತ ತಲುಪದೆ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ಯಾವುದೇ ಸೂಕ್ತ ಮುನ್ನೆಚ್ಚರಿಕೆ ಫಲಕಗಳಿಲ್ಲದೆ, ರಸ್ತೆ ತಿರುವುಗಳನ್ನು ತೀರಾ ಅವೈಜ್ಞಾನಿಕವಾಗಿ ಮಾಡಿರುವುದರಿಂದ ನಿತ್ಯ ವಾಹನ ಸವಾರರು ಗೊಂದಲಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದರೂ ಕಂಪನಿಯು ಯಾವುದೇ ಎಚ್ಚರಿಕೆ ವಹಿಸದೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಮುರುಡೇಶ್ವರ ಪೊಲೀಸರು ತಕ್ಷಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರನ್ನು ಸಮಾಧಾನಪಡಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಸ್ಥಳದಲ್ಲಿದ್ದ ವಾಹನಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದೆ.
