ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಬಸ್ ನಿಲ್ಲಿಸದ ಕೋಪ: ಮಹಿಳೆಯ ಆಕ್ರೋಶಕ್ಕೆ ಬಸ್ ಗಾಜು ಚೂರು!

Pakka News Web • 16 ಜುಲೈ 2026,

ರಾಮನಗರ:ಅಂದುಕೊಂಡ ಜಾಗದಲ್ಲಿ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೆಂಡಾಮಂಡಲವಾದ ಮಹಿಳೆಯೊಬ್ಬರು, ಚಲಿಸುತ್ತಿದ್ದ ಬಸ್‌ನಲ್ಲೇ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಬಳಿಕ ರಸ್ತೆ ಬದಿಯ ಕಲ್ಲು ತೂರಿ ಬಸ್‌ನ ಮುಂಭಾಗದ ಗಾಜನ್ನು ಪುಡಿಪುಡಿ ಮಾಡಿರುವ ಘಟನೆ ನಡೆದಿದೆ.

ಕೊಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ಕೆ.ಎ.-23 ಎಫ್-1106) ಖಾನಾಪುರ ನಿಲ್ದಾಣಕ್ಕೆ ಬಂದಾಗ ಈ ಹೈಡ್ರಾಮಾ ನಡೆದಿದೆ. ಗುಂಜಿಗೆ ಹೋಗಬೇಕಿದ್ದ ಮಹಿಳೆಯೊಬ್ಬರು ಗಡಿಬಿಡಿಯಲ್ಲಿ ಈ ಬಸ್ ಹತ್ತಿದ್ದರು. ಆದರೆ, ಈ ಬಸ್ ಗುಂಜಿಯಲ್ಲಿ ನಿಲ್ಲುವುದಿಲ್ಲ ಎಂದು ಕಂಡಕ್ಟರ್ ಮೊದಲೇ ಸ್ಪಷ್ಟಪಡಿಸಿದ್ದರು. ಆದರೂ ಮಹಿಳೆ ಅದೇ ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದರು ಎನ್ನಲಾಗಿದೆ. ಅನಿವಾರ್ಯವಾಗಿ ಕಂಡಕ್ಟರ್ ಆಕೆಗೆ ಗುಂಜಿಯಿಂದ ಲೋಂಡಾವರೆಗಿನ ಟಿಕೆಟ್ ನೀಡಿದ್ದರು.

ಯಾವಾಗ ಬಸ್ ಗುಂಜಿಯನ್ನು ದಾಟಿ ಲೋಂಡಾ ತಲುಪಿತೋ, ಆ ಕ್ಷಣದಲ್ಲೇ ಮಹಿಳೆಯ ಆಕ್ರೋಶ ಕಟ್ಟೆಯೊಡೆದಿದೆ. “ನನ್ನ ಊರಿನಲ್ಲಿ ಬಸ್ ಏಕೆ ನಿಲ್ಲಿಸಲಿಲ್ಲ?” ಎಂದು ಕಿರುಚಾಡುತ್ತಾ ಕಂಡಕ್ಟರ್ ಜೊತೆ ತೀವ್ರ ವಾಗ್ವಾದಕ್ಕಿಳಿದ ಮಹಿಳೆ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೇ ಆಕೆಯ ಸಿಟ್ಟು ತಣಿಯಲಿಲ್ಲ. ಬಸ್‌ನಿಂದ ಕೆಳಗಿಳಿಯುತ್ತಲೇ ರಸ್ತೆ ಬದಿಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು, ಬಸ್‌ನ ಮುಂಭಾಗದ ಗಾಜಿಗೆ ಬಲವಾಗಿ ಹೊಡೆದಿದ್ದಾರೆ. ಕಲ್ಲಿನೇಟಿಗೆ ಬಸ್‌ನ ಮುಂಭಾಗದ ಗಾಜು ಚೂರುಚೂರಾಗಿದೆ.

ಈ ದಿಢೀರ್ ಘಟನೆಯಿಂದ ದಿಕ್ಕೆಟ್ಟ ಚಾಲಕ ಮತ್ತು ನಿರ್ವಾಹಕರು ತಕ್ಷಣವೇ ಬಸ್ ಅನ್ನು ರಾಮನಗರ ಪೊಲೀಸ್ ಠಾಣೆಗೆ ಕೊಂಡೊಯ್ದರು. ಆದರೆ ಘಟನೆ ನಡೆದಿದ್ದು ಗುಂಜಿ–ಲೋಂಡಾ ವ್ಯಾಪ್ತಿಯಲ್ಲಿದ್ದರಿಂದ, ಲೋಂಡಾ ಪೊಲೀಸ್ ಔಟ್‌ಪೋಸ್ಟ್‌ಗೆ ಹೋಗುವಂತೆ ಅಲ್ಲಿನ ಪೊಲೀಸರು ಸೂಚಿಸಿದರು. ಆದರೆ, ಲೋಂಡಾ ಔಟ್‌ಪೋಸ್ಟ್‌ನಲ್ಲಿ ಪ್ರಕರಣ ದಾಖಲಿಸುವ ಅಧಿಕಾರವಿಲ್ಲದ ಕಾರಣ, ಅಂತಿಮವಾಗಿ ದೂರು ನೀಡಲು ಖಾನಾಪುರ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕಾಯಿತು.

ಇತ್ತ ಪೊಲೀಸರ ಕಾನೂನು ಪ್ರಕ್ರಿಯೆಯ ಮಧ್ಯೆ ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಕೊನೆಗೆ ಎಲ್ಲರನ್ನೂ ಮಧ್ಯದಲ್ಲೇ ಇಳಿಸಿ, ಪರ್ಯಾಯ ಬಸ್ ವ್ಯವಸ್ಥೆಯ ಮೂಲಕ ಕಳುಹಿಸಿಕೊಡಲಾಯಿತು. ಸದ್ಯ ಹಾನಿಗೊಳಗಾದ ಬಸ್ ಅನ್ನು ಖಾನಾಪುರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಸಂಬಂಧಿತ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಪ್ರಕ್ರಿಯೆ ನಡೆದಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250