ಮೀನುಗಾರಿಕೆ ಬಂದರಿನಲ್ಲಿ ಲಂಗರು ಹಾಕಿ ಕೆಲಸ ನಿರ್ವಹಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಪರ್ಷಿಯನ್ ಬೋಟ್ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡಿನ ಡೊಂಕದಲ್ಲಿ ಸಂಭವಿಸಿದೆ.
ಆಯುಬ್ ಸಾಬ್ ಎಂಬುವವರಿಗೆ ಸೇರಿದ ಈ ಬೋಟ್ ಬಂದರಿನಲ್ಲಿ ನಿಂತಿದ್ದಾಗ ಬೋಟ್‌ನಿಂದ ಏಕಾಏಕಿ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಆವರಿಸಿಕೊಂಡವು. ತಕ್ಷಣವೇ ಸನ್ನದ್ಧರಾದ ಸ್ಥಳೀಯರು ಮತ್ತು ಮೀನುಗಾರರು ಜೀವದ ಹದನೋಡದೆ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ, ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಬೋಟ್ ಸಂಪೂರ್ಣವಾಗಿ ಜ್ವಾಲೆಗೆ ಬಲಿಯಾಗಿದೆ.

ಈ ದುರಂತದಲ್ಲಿ ಬೋಟ್‌ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಾರಿಕಾ ಬಲೆಗಳು ಹಾಗೂ ಶಕ್ತಿಶಾಲಿ ಇಂಜಿನ್‌ಗಳು ಪೂರ್ಣಪ್ರಮಾಣದಲ್ಲಿ ಭಸ್ಮೀಭೂತವಾಗಿವೆ. ಘಟನೆಯಿಂದ ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
