ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ಲೈಕ್ ಹುಚ್ಚಿಗೆ ತೂಫಾನ್ ಸಾಹಸ: ಬಿತ್ತು ಕೇಸ್‌!

Pakka News Web • 23 ಜುಲೈ 2026,

 ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಲೈಕ್ಸ್ ಮತ್ತು ಫಾಲೋವರ್ಸ್ ಗಿಟ್ಟಿಸಿಕೊಳ್ಳುವ ಹುಚ್ಚಿನಲ್ಲಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ದಾಂಡೇಲಿಯಲ್ಲಿ ಅಂತಹದ್ದೇ ಉಡಾಫೆಯ ಮತ್ತು ಅಪಾಯಕಾರಿ ರೀಲ್ಸ್ ಪ್ರದರ್ಶನ ನೀಡಿದ ತೂಫಾನ್ ವಾಹನದ ಚಾಲಕನಿಗೆ ಪೊಲೀಸರು ಸರಿಯಾಗಿಯೇ ಶಾಕ್ ನೀಡಿದ್ದಾರೆ.

ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮದ ಇನ್ಫಿನಿಟಿ ಹೋಮ್‌ಸ್ಟೇ ಹತ್ತಿರ ಚಾಲಕನೊಬ್ಬ ಸಾರಿಗೆ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದನು. ತೂಫಾನ್ ಕ್ರೂಸರ್ ವಾಹನದ (KA-24/A-0450) ಬಾನೆಟ್ ಹಾಗೂ ಟಾಪ್ (ಮೇಲ್ಛಾವಣಿ) ಮೇಲೆ ಸುಮಾರು 10 ರಿಂದ 12 ಜನರನ್ನು ಕುಳ್ಳಿರಿಸಿಕೊಂಡು, ಜನರ ಪ್ರಾಣಕ್ಕೆ ಅಪಾಯವಾಗುವಂತೆ ಅತಿ ವೇಗ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದನು. ಇಷ್ಟೇ ಅಲ್ಲದೆ, ಈ ರೋಮಾಂಚಕ ಹೈ-ಡ್ರಾಮಾವನ್ನು ವಿಡಿಯೋ ಮಾಡಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು ‘ಹೀರೋಯಿಸಂ’ ಮೆರೆಯಲಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಸಿ ಸುಭಾಷ ಸಾಲಮಂಟಪ ಅವರ ಗಮನಕ್ಕೆ ಬಂದ ತಕ್ಷಣವೇ ಪೊಲೀಸರು ಆಕ್ಷನ್ ಮೋಡ್‌ಗೆ ಇಳಿದಿದ್ದಾರೆ. ಸುಭಾಷ ಸಾಲಮಂಟಪ ಅವರು ನೀಡಿದ ದೂರಿನನ್ವಯ ಚಾಲಕನ ವಿರುದ್ಧ ನೂತನ ಬಿಎನ್‌ಎಸ್ (BNS) ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಈ ಘಟನೆಯ ಬೆನ್ನಲ್ಲೇ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಪೊಲೀಸ್ ಇಲಾಖೆಯು, ರಸ್ತೆ ಸುರಕ್ಷತೆ ಎಂಬುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ವಾಹನಗಳ ಬಾನೆಟ್, ಟಾಪ್ ಹಾಗೂ ಫುಟ್‌ಬೋರ್ಡ್ಗಳ ಮೇಲೆ ಕುಳಿತು ಪ್ರಯಾಣಿಸುವುದು ಅತ್ಯಂತ ಅಪಾಯಕಾರಿ ಎಂದು ತಿಳಿಸಿದೆ. ಒಂದು ಸಣ್ಣ ನಿರ್ಲಕ್ಷ್ಯವೂ ಅಪಾರ ಪ್ರಾಣಹಾನಿಗೆ ಕಾರಣವಾಗಬಹುದು. ಪ್ರಚಾರಕ್ಕಾಗಿ ರಸ್ತೆಗಳಲ್ಲಿ ಅಪಾಯಕಾರಿ ಸಾಹಸಗಳನ್ನು ಮಾಡುವವರ ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಖಾತೆಗಳ ಮೇಲೆ ನಿರಂತರ ನಿಗಾ ವಹಿಸಲಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವ ಚಾಲಕರು ಮತ್ತು ವಾಹನ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಅವರ ಚಾಲನಾ ಪರವಾನಗಿಯನ್ನು (DL) ರದ್ದುಪಡಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಲೈಕ್ಸ್ ಮತ್ತು ಫಾಲೋವರ್ಸ್‌ಗಿಂತ ಜೀವ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250