ರಾಷ್ಟ್ರೀಯ ಹೆದ್ದಾರಿಯ ಅಪಾಯಕಾರಿ ತಿರುವಿನಲ್ಲಿ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್‌ಗೆ ಭೀಕರವಾಗಿ ಡಿಕ್ಕ ಹೊಡೆದು ಪಲ್ಟಿಯಾದ ಘಟನೆ ಹೊನ್ನಾವರದ ತಾಲೂಕಿನ ಆರೋಳ್ಳಿ ತಿರುವಿನ ಮುಗ್ವಾ ಚರ್ಚ್ ಕ್ರಾಸ್ ಸಮೀಪ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟೆಂಪೋ ರಸ್ತೆ ಮಧ್ಯದಲ್ಲೇ ಮಗುಚಿ ಬಿದ್ದಿದ್ದು, ಸದ್ಯ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪವಾಡಸದೃಶವಾಗಿ ಪಾರಾಗಿದ್ದಾರೆ.
ಹೊನ್ನಾವರದಿಂದ ಗೇರುಸೊಪ್ಪ ಮಾರ್ಗವಾಗಿ ಸಾಗುತ್ತಿದ್ದ ಟೆಂಪೋ, ಎದುರಿನಿಂದ ಅಂದರೆ ಹಡಿನಬಾಳದಿಂದ ಹೊನ್ನಾವರದತ್ತ ಬರ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಟೆಂಪೋ ಚಾಲಕನ ಅತಿಯಾದ ವೇಗ ಹಾಗೂ ಅಜಾಗರೂಕತೆಯೇ ಈ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗಿದ್ದು, ನಿಯಂತ್ರಣ ಸಿಗದೆ ಬಸ್‌ಗೆ ಗುದ್ದಿದ ರಭಸಕ್ಕೆ ಟೆಂಪೋದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್‌ನ ಎಡಭಾಗಕ್ಕೂ ಹಾನಿಯಾಗಿದ್ದು, ಟೆಂಪೋ ಚಾಲಕ ಸೇರಿದಂತೆ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ತಕ್ಷಣವೇ ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಇನ್ನು ರಾಷ್ಟ್ರೀಯ ಹೆದ್ದಾರಿಯಲ್ಲೇ ವಾಹನ ಪಲ್ಟಿಯಾದ್ದರಿಂದ ಕೆಲಕಾಲ ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿ, ಸಾಲು ಸಾಲು ವಾಹನಗಳು ನಿಲ್ಲುವಂತಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಹೊನ್ನಾವರ ಠಾಣೆ ಪೊಲೀಸರು, ಕ್ರೇನ್ ನೆರವಿನಿಂದ ವಾಹನಗಳನ್ನು ಪಕ್ಕಕ್ಕೆ ಸರಿಸಿ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದರು. ಈ ಸಂಬಂಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
