ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Crime

ರೌಡಿಶೀಟರ್ ಉತ್ತರ ಕನ್ನಡದಿಂದ ಗಡಿಪಾರು!

Pakka News Web • 26 ಜುಲೈ 2026,

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿದ್ದ ರೌಡಿಶೀಟರ್ ಒಬ್ಬನಿಗೆ ಜಿಲ್ಲಾ ಪೊಲೀಸ್ ಇಲಾಖೆ ತಕ್ಕ ಶಾಸ್ತಿ ಮಾಡಿದೆ. ಬನವಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕುಖ್ಯಾತ ಅಪರಾಧಿ, ಶಿರಸಿ ತಾಲೂಕಿನ ಬದನಗೋಡ ನಿವಾಸಿ ಸಂತೋಷ ಫಕ್ಕಿರಪ್ಪ ಬೋವಿವಡ್ಡರ (27) ಎಂಬಾತನನ್ನು ಆರು ತಿಂಗಳ ಅವಧಿಗೆ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

ಬನವಾಸಿ ಠಾಣೆಯಲ್ಲಿ ‘ಎ’ ರೌಡಿಶೀಟರ್ ಆಗಿರುವ ಈತನ ವಿರುದ್ಧ 2017ರಿಂದ 2026ರ ಅವಧಿಯಲ್ಲಿ ಕಳ್ಳತನ, ಸುಲಿಗೆ, ಅತ್ಯಾಚಾರ ಹಾಗೂ ಎನ್‌ಡಿಪಿಎಸ್‌ ಸೇರಿದಂತೆ ಬನವಾಸಿಯಲ್ಲಿ 9, ಶಿರಸಿ ಗ್ರಾಮೀಣ ಮತ್ತು ಎನ್‌.ಎಂ. ಠಾಣೆಗಳಲ್ಲಿ ತಲಾ ಒಂದರಂತೆ ಒಟ್ಟು 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ನಿರಂತರ ನಿಗಾ ನಡುವೆಯೂ ತನ್ನ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ್ದ ಈತನಿಂದ ಸಾರ್ವಜನಿಕ ನೆಮ್ಮದಿಗೆ ಭಂಗ ಬರಲಿದೆ ಎಂದು ಬನವಾಸಿ ಉಪನಿರೀಕ್ಷಕರು ಸಲ್ಲಿಸಿದ್ದ ಸುದೀರ್ಘ ಪ್ರಸ್ತಾವನೆಯನ್ನು ಪರಿಶೀಲಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಈ ಕಠಿಣ ಕ್ರಮ ಕೈಗೊಂಡಿದ್ದಾರೆ.

ಅದರಂತೆ ಜುಲೈ 23ರಂದು ಹೊರಬಿದ್ದ ಆದೇಶದ ಪ್ರಕಾರ, ಆರೋಪಿಯನ್ನು 2027ರ ಜನವರಿ 22ರವರೆಗೆ ಉತ್ತರ ಕನ್ನಡ ಜಿಲ್ಲೆಯ ಗಡಿಯಿಂದ ಆಚೆಗೆ, ಅಂದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ಪೊಲೀಸ್‌ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ. ಬನವಾಸಿ ಪೊಲೀಸರು ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಅತ್ತಿಬೆಲೆ ಠಾಣಾಧಿಕಾರಿಗಳ ಮುಂದೆ ಹಾಜರುಪಡಿಸುವ ಮೂಲಕ ಗಡಿಪಾರು ಆದೇಶವನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250