ನೆರೆಯ ಗೋವಾದಿಂದ ಅಕ್ರಮವಾಗಿ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಗಾಂಜಾ ಜಾಲವನ್ನು ಭೇದಿಸಿರುವ ಕಾರವಾರ ಗ್ರಾಮೀಣ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ಗಾಂಜಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಬಿಣಗಾದ ರಾಮನಗರದ ಬಳಿ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಈ ಯಶಸ್ಸು ಸಾಧಿಸಿದ್ದಾರೆ.
ಖಚಿತ ಮಾಹಿತಿಯನ್ನಾಧರಿಸಿ ಬಿಣಗಾದ ರಾಮನಗರದ ಬಳಿ ದಾಳಿ ನಡೆಸಿದ ಕಾರವಾರ ಗ್ರಾಮೀಣ ಠಾಣೆಯ ಸಿಬ್ಬಂದಿ, ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸುಮಾರು 25 ಸಾವಿರ ರೂ. ಮೌಲ್ಯದ 465 ಗ್ರಾಂ ತೂಕದ ಗಾಂಜಾ, ಸಾಗಾಟಕ್ಕೆ ಬಳಸಿದ್ದ ಒಂದು ಬೈಕ್ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರವಾರ ತಾಲೂಕಿನ ಸದಾಶಿವಗಡ ತಾರೀವಾಡದ ನಿವಾಸಿ ನಾಗರಾಜ್ (26) ಹಾಗೂ ವಿನೋದ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳು ಗೋವಾದಿಂದ ಅಕ್ರಮವಾಗಿ ಗಾಂಜಾವನ್ನು ತಂದು ಇಲ್ಲಿನ ಸ್ಥಳೀಯರಿಗೆ ಮಾರಾಟ ಮಾಡಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
