ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಹಾಗೂ ಕಮೆಂಟ್ಗಳ ಪ್ರಸಿದ್ದಿಗಾಗಿ ಸಮಾಜವೊಂದರ ಆಡುಭಾಷೆಯನ್ನು ವ್ಯಂಗ್ಯವಾಡಿ ರೀಲ್ಸ್ ಹಂಚಿಕೊಂಡ ಆರೋಪದಡಿಯಲ್ಲಿ ಯುವತಿಯೊಬ್ಬಳ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಕ್ಷತ್ರಿಯ ಕೋಮಾರಪಂತ ಸಮಾಜದ ವಿಶಿಷ್ಟ ಆಡುಭಾಷೆಯನ್ನು ಸಾಮಾನ್ಯ ಕನ್ನಡದೊಂದಿಗೆ ಹೋಲಿಸಿ, ಹಾಸ್ಯಾಸ್ಪದವಾಗಿ ಚಿತ್ರಿಸಿ ರೀಲ್ಸ್ ಮಾಡಿ, ವಿಡಿಯೊ ಪೋಸ್ಟ್ ಮಾಡಿದ್ದಳು, ಈ ವೀಡಿಯೋಗೆ ಸಮಾಜದ ಯುವಕರು ಆಕ್ಷೇಪ ವ್ಯಕ್ತಪಡಿಸಿದಾಗ, ಯುವತಿಯು ಕಮೆಂಟ್ ವಿಭಾಗದಲ್ಲಿ ಅವಹೇಳನಕಾರಿ ಶಬ್ದಗಳನ್ನು ಬಳಸಿ ನಿಂದಿಸಿದ್ದಾಳೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋ ಕೋಮಾರಪಂತ ಸಮಾಜದ ಭಾಷೆ ಹಾಗೂ ಸಂಸ್ಕೃತಿಗೆ ಧಕ್ಕೆ ತಂದಿದ್ದು, ಸಾರ್ವಜನಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯರಾದ ಶ್ರೀನಿವಾಸ ಲೋಕಪ್ಪ ನಾಯ್ಕ ಅವರು ಅಂಕೋಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.
