ಕಾರವಾರ:ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಶವ ಬುಧವಾರ ಮುಂಜಾನೆ ಪತ್ತೆಯಾಗಿದೆ.
ಮಂಗಳವಾರ ಸಂಜೆ ವಾರ್ಶಿಪ್ ಮ್ಯೂಸಿಯಂ ಹಿಂಭಾಗದ ಕಡಲತೀರಕ್ಕೆ ಬಂದಿದ್ದ ವ್ಯಕ್ತಿ ತನ್ನ ಬ್ಯಾಗ್ನ್ನು ತೀರದಲ್ಲೇ ಬಿಟ್ಟು ಸಮುದ್ರಕ್ಕೆ ಇಳಿದಿದ್ದರು. ಕೆಲವೇ ಕ್ಷಣಗಳಲ್ಲಿ ಅವರು ಪ್ರಬಲ ಅಲೆಗಳ ನಡುವೆ ಕಾಣೆಯಾಗಿದ್ದರು. ವಿಷಯ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಲೈಫ್ಗಾರ್ಡ್ ಸಿಬ್ಬಂದಿ, ಕರಾವಳಿ ಕಾವಲು ಪಡೆ ಹಾಗೂ ಕಾರವಾರ ನಗರ ಠಾಣೆ ಪೊಲೀಸರು ಸಂಯುಕ್ತವಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ ಸಮುದ್ರದ ಅಬ್ಬರ ಹೆಚ್ಚಿದ್ದ ಕಾರಣ ರಾತ್ರಿ ವೇಳೆಗೆ ವ್ಯಕ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಬುಧವಾರ ಬೆಳಿಗ್ಗೆ ದಿವೇಕರ್ ಕಾಲೇಜು ಹಿಂಭಾಗದ ಸಮುದ್ರ ತೀರದಲ್ಲಿ ಶವ ತೇಲಿ ಬಂದಿರುವುದನ್ನು ಸಾರ್ವಜನಿಕರು ಗಮನಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಕರಾವಳಿ ಕಾವಲು ಪಡೆ ಸಿಬ್ಬಂದಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.
ವ್ಯಕ್ತಿ ಬಿಟ್ಟುಹೋಗಿದ್ದ ಬ್ಯಾಗ್ನಲ್ಲಿ ಬಟ್ಟೆಗಳು, ಬೆಡ್ಶೀಟ್ ಹಾಗೂ ಟೋಪಿ ಪತ್ತೆಯಾಗಿದ್ದು, ಅವುಗಳ ಆಧಾರದ ಮೇಲೆ ಮೃತನ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಗುರುತು ಹಾಗೂ ಸಮುದ್ರಕ್ಕೆ ಇಳಿದ ಸಂದರ್ಭದ ಕುರಿತು ತನಿಖೆ ಮುಂದುವರಿದಿದೆ.
