ಅಂಕೋಲಾದ ಮೂಲೆಮನೆ ಸಮೀಪ ಖಾಸಗಿ ಬಸ್ ಮತ್ತು ಲಾರಿ ನಡುವೆ ಗುರುವಾರ ಸಂಭವಿಸಿದ ಮುಖಾಮುಖಿ ಡಿಕ್ಕಿಯಾಗಿದ್ದು ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೈದ್ರಾಬಾದ್‌ನಿಂದ ಗೋಕರ್ಣ ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಹಾಗೂ ಕೊಚ್ಚಿಯಿಂದ ಪುಣೆಗೆ ತೆರಳುತ್ತಿದ್ದ ಲಾರಿಯ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳ ಮುಂಭಾಗ ತೀವ್ರವಾಗಿ ಜಖಂಗೊಂಡಿವೆಯಾದರೂ, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದ ಕಾರಣದಿಂದಾಗಿ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
