ಆನ್ಲೈನ್ ವಂಚನೆಗೆ ಒಳಗಾದ ಗ್ರಾಹಕರ ದೂರಿಗೆ ತಕ್ಷಣ ಸ್ಪಂದಿಸಿ ಹಣ ವರ್ಗಾವಣೆ ತಡೆಯುವಲ್ಲಿ ವಿಫಲವಾದ ಕೆನರಾ ಬ್ಯಾಂಕ್ ಮ್ಯಾನೇಜರ್ಗೆ ಕಾರವಾರದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಭಾರಿ ದಂಡ ವಿಧಿಸಿದೆ.
ವಂಚನೆಗೊಳಗಾದ 20.21 ಲಕ್ಷ ರೂಪಾಯಿ ಹಣವನ್ನು ಶೇ. 8ರ ಬಡ್ಡಿಯೊಂದಿಗೆ ಗ್ರಾಹಕರಿಗೆ ಮರಳಿಸುವಂತೆ ಹಾಗೂ 35 ಸಾವಿರ ರೂಪಾಯಿ ಹೆಚ್ಚುವರಿ ಪರಿಹಾರ ಪಾವತಿಸುವಂತೆ ಆಯೋಗವು ಐತಿಹಾಸಿಕ ಆದೇಶ ನೀಡಿದೆ.
ಭಟ್ಕಳದ ಬೆಳಕೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ ನಾಯ್ಕ ಅವರು ಕೆನರಾ ಬ್ಯಾಂಕಿನ ಬೆಳಕೆ ಶಾಖೆಯ ತಮ್ಮ ಓಡಿ (OD) ಖಾತೆಯಿಂದ ಹಣ ಕಡಿತವಾದ ತಕ್ಷಣವೇ, ಅಂದರೆ 2025ರ ಫೆಬ್ರವರಿ 9ರಂದೇ ಬ್ಯಾಂಕ್ ಮ್ಯಾನೇಜರ್, ಪ್ರಾದೇಶಿಕ ಕಚೇರಿ, ಸೈಬರ್ ಹೆಲ್ಪ್ಲೈನ್ (1930) ಹಾಗೂ ಪೊಲೀಸರಿಗೆ ದೂರು ನೀಡಿ ಖಾತೆ ಫ್ರೀಜ್ ಮಾಡಲು ಮನವಿ ಮಾಡಿದ್ದರು.
ಆದರೂ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ವಂಚಕರು ಬ್ಯಾಂಕಿನಲ್ಲಿದ್ದ 20.21 ಲಕ್ಷ ರೂಪಾಯಿಯನ್ನು ಹರಿಯಾಣ ಮೂಲದ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಇದರಿಂದ ಕಂಗಾಲಾದ ಜಗದೀಶ ನಾಯ್ಕ ಅವರು ನ್ಯಾಯಕ್ಕಾಗಿ ಗ್ರಾಹಕ ಆಯೋಗದ ಮೊರೆ ಹೋಗಿದ್ದರು.
ವಿಚಾರಣೆ ವೇಳೆ ಬ್ಯಾಂಕ್ ಅಧಿಕಾರಿಗಳು ಗ್ರಾಹಕರೇ ಓಟಿಪಿ ಹಾಗೂ ಪಾಸ್ವರ್ಡ್ ಬಳಸಿ ವಹಿವಾಟು ನಡೆಸಿದ್ದಾರೆ ಎಂದು ವಾದಿಸಿದರಾದರೂ, ಆಯೋಗ ಅದನ್ನು ತಳ್ಳಿಹಾಕಿದೆ.
ಆರಂಭದಲ್ಲಿ ಬ್ಯಾಂಕಿನ ತಪ್ಪಿಲ್ಲದಿದ್ದರೂ, ಗ್ರಾಹಕರು ತಕ್ಷಣ ದೂರು ನೀಡಿದಾಗ ತಕ್ಷಣವೇ ಖಾತೆ ಫ್ರೀಜ್ ಮಾಡಿ ಮಧ್ಯವರ್ತಿ ಬ್ಯಾಂಕ್ನಿಂದ ಹಣ ವಾಪಸ್ ಪಡೆಯಲು ಅವಕಾಶವಿತ್ತು; ಈ ವಿಳಂಬಕ್ಕೆ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅಧ್ಯಕ್ಷ ಮಾರುತಿ ವಡ್ಡರ್ ಹಾಗೂ ಸದಸ್ಯೆ ನಯನಾ ಕಾಮಟೆ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ಹಾಗೂ ಮಾನಸಿಕ ಕಿರುಕುಳಕ್ಕಾಗಿ 25 ಸಾವಿರ ರೂ. ಮತ್ತು ಪ್ರಕರಣದ ವೆಚ್ಚವಾಗಿ 10 ಸಾವಿರ ರೂ.ಗಳನ್ನು ಬೆಳಕೆ ಶಾಖಾ ವ್ಯವಸ್ಥಾಪಕರು ಹಾಗೂ ಕಾರವಾರ ರೀಜನಲ್ ಮ್ಯಾನೇಜರ್ ಜಂಟಿಯಾಗಿ ಪಾವತಿಸುವಂತೆ ಆದೇಶಿಸಿದೆ.
