ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

Crime

ಮಾವ-ಅಳಿಯಂದಿರ ಪರಸ್ಪರ ಹಲ್ಲೆ ಆರೋಪ ಎಫ್‌ಐಆರ್!

Pakka News Web • 2 ಆಗಸ್ಟ್ 2026,

ಮನೆ ಬಾಡಿಗೆ ವಿಚಾರದಲ್ಲಿ ಮಾವ ಮತ್ತು ಅಳಿಯ ನಡುವೆ ಉಂಟಾದ ಸಣ್ಣ ಮಾತಿನ ಚಕಮಕಿ ತೀವ್ರ ವಿಕೋಪಕ್ಕೆ ತಿರುಗಿ, ಪರಸ್ಪರ ಹಲ್ಲೆ ನಡೆಸಿಕೊಂಡಿರುವ ಘಟನೆ ಭಟ್ಕಳ ನಗರದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ನೀಡಿದ ದೂರಿನನ್ವಯ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ.

ಆಜಾದ್ ನಗರದ ಶೇಡುಕುಳಿ ಹೊಂಡ ನಿವಾಸಿ ಅಮೀರ್ ಶೇಖ್ ಹಾಗೂ ಅವರ ಅಳಿಯ ಮಹಮ್ಮದ್ ಅಫಾನ್ ಇಸ್ಮಾಯಿಲ್ ಶೇಖ್ (34) ನಡುವೆ ಮನೆ ಬಾಡಿಗೆ ವಿಚಾರವಾಗಿ ಜಗಳ ಪ್ರಾರಂಭವಾಗಿದೆ. ಈ ವೇಳೆ ಮಾವ ಅಮೀರ್ ಶೇಖ್ ಅಳಿಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳದಲ್ಲಿದ್ದ ಟೈಲ್ಸ್ ತುಂಡಿನಿಂದ ತಲೆಗೆ ಹೊಡೆದು, ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗಾಯಗೊಂಡ ಅಫಾನ್ ಅವರನ್ನು ಸ್ಥಳೀಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮಹಮ್ಮದ್ ಅಫೀಫ್ ನೀಡಿದ ದೂರಿನ ಮೇರೆಗೆ ಪೊಲೀಸರು ಮೊದಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ಘಟನೆಗೆ ಸಂಬಂಧಿಸಿದಂತೆ ಮೂಸಾನಗರ ನಿವಾಸಿ ಹಾಗೂ ಮಾವ ಅಮೀರ್ ಶೇಖ್ (61) ಕೂಡ ಅಳಿಯ ಅಫಾನ್ ವಿರುದ್ಧ ಪ್ರತಿದೂರು ನೀಡಿದ್ದಾರೆ. ಅಫಾನ್ ಕಳೆದ ಏಳು ತಿಂಗಳಿಂದ ತಮ್ಮ ಮನೆಯಲ್ಲೇ ಬಾಡಿಗೆಗಿದ್ದು, ಬಾಡಿಗೆ ಹಣ ಪಾವತಿಸದ ವಿಚಾರವಾಗಿ ಈಗಾಗಲೇ ತನಿಖೆ ನಡೆಯುತ್ತಿತ್ತು.

ಘಟನಾ ದಿನ ತಾವು ಮನೆಯಲ್ಲಿ ಇಲ್ಲದಿದ್ದಾಗ ಬಂದ ಅಫಾನ್, ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕಲ್ಲಿನಿಂದ ತಲೆ ಹಾಗೂ ದೇಹಕ್ಕೆ ಹೊಡೆದು, ಗೇಟ್‌ಗೆ ಒದ್ದು, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಅಮೀರ್ ಶೇಖ್ ಆರೋಪಿಸಿದ್ದಾರೆ. ಪ್ರಸ್ತುತ ಭಟ್ಕಳ ನಗರ ಠಾಣೆಯ ಪೊಲೀಸರು ಎರಡೂ ದೂರುಗಳನ್ನು ಸ್ವೀಕರಿಸಿದ್ದು, ಘಟನೆಯ ಕುರಿತು ಮುಂದಿನ ಕಾನೂನು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250