ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬೇರೆ ಬೇರೆ ಅವಧಿಗಳಲ್ಲಿ ನಾಲ್ವರು ಸಾರ್ವಜನಿಕರು ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ತಾಲೂಕಿನಾದ್ಯಂತ ತೀವ್ರ ಕುತೂಹಲ ಹಾಗೂ ಆತಂಕಕ್ಕೆ ಕಾರಣವಾಗಿವೆ. ಕಣ್ಮರೆಯಾದವರ ಪತ್ತೆಗಾಗಿ ಮುಂಡಗೋಡ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಪ್ರಕರಣ 1: ಕೆಲಸಕ್ಕೆ ತೆರಳಿದ್ದ ಯುವಕ ಮರಳಲೇ ಇಲ್ಲಿ
ಮುಂಡಗೋಡ ತಾಲೂಕಿನ ಪಾಳಾ ಗ್ರಾಮದ ನಿವಾಸಿ ಸಂತೋಷ್ ಶೇಕಪ್ಪ ಮಲ್ಲೂರ (36) ಎಂಬುವವರು 2024ರ ಸೆಪ್ಟೆಂಬರ್ 10ರಂದು ಸಂಜೆ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದರು. ಆದರೆ, ಅದಾದ ಬಳಿಕ ಅವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ. ಗೋಧಿ ಮೈಬಣ್ಣ, ದುಂಡನೆಯ ಮುಖ, 5.5 ಅಡಿ ಎತ್ತರ ಹಾಗೂ ಸದೃಢ ಮೈಕಟ್ಟು ಹೊಂದಿರುವ ಸಂತೋಷ್, ಕಣ್ಮರೆಯಾದಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಚಾಕೊಲೇಟ್ ಬಣ್ಣದ ಟೀಶರ್ಟ್ ಧರಿಸಿದ್ದರು. ಇವರು ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ.

ಪ್ರಕರಣ 2: ಮನೆಯಲ್ಲಿದ್ದ ಮಹಿಳೆ ಇದ್ದಕ್ಕಿದ್ದಂತೆ ಕಣ್ಮರೆ
ಬೆಳಗಾವಿ ಉಪ್ಪಾರಗಲ್ಲಿ ಮೂಲದವರಾಗಿದ್ದು, ಮುಂಡಗೋಡಿನ ನಂದೀಶ್ವರನಗರದಲ್ಲಿ ವಾಸವಿದ್ದ ಆದಿತಿ ಆನಂದ ಬಸ್ತವಾಡ (29) ಎಂಬ ಮಹಿಳೆ 2025ರ ಮಾರ್ಚ್ 7ರಂದು ಕಣ್ಮರೆಯಾಗಿದ್ದಾರೆ. ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾರಿಗೂ ತಿಳಿಸದೆ ಅವರು ಹೊರಟು ಹೋಗಿದ್ದಾರೆ. 5.4 ಅಡಿ ಎತ್ತರ, ಗೋಧಿ ಮೈಬಣ್ಣ ಹಾಗೂ ಉದ್ದನೆಯ ಮುಖ ಹೊಂದಿರುವ ಇವರು ಕಪ್ಪು-ಬಿಳಿ ಮಿಶ್ರಿತ ಟೀಶರ್ಟ್ ಮತ್ತು ನೈಟ್ ಪ್ಯಾಂಟ್ ಧರಿಸಿದ್ದರು. ಇವರು ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವರಾಗಿದ್ದಾರೆ.

ಪ್ರಕರಣ 3: ಮನೆಯಿಂದ ಹೊರಟ ಆಂಜನೇಯ ನಿಗೂಢ ನಾಪತ್ತೆ
ಹಿರೇಹಳ್ಳಿ ಗ್ರಾಮದ ನಿವಾಸಿ ಆಂಜನೇಯ ಜಟ್ಟಿಂಗಪ್ಪ ಕೃಷ್ಣಾಜಿಯವರ (45) ಎಂಬುವವರು 2025ರ ಜೂನ್ 19ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಹೊರಟು ಹೋಗಿದ್ದು, ಇದುವರೆಗೂ ಮನೆಗೆ ಮರಳಿ ಬಂದಿಲ್ಲ. ಗೋಧಿ ಮೈಬಣ್ಣ, ಉದ್ದನೆಯ ಮುಖ ಹಾಗೂ 5.4 ಅಡಿ ಎತ್ತರವಿರುವ ಇವರು ಕಣ್ಮರೆಯಾದ ಸಮಯದಲ್ಲಿ ಗುಲಾಬಿ ಬಣ್ಣದ ಶರ್ಟ್ ಹಾಗೂ ಚೆಕ್ಸ್ ಲುಂಗಿ ಧರಿಸಿದ್ದರು. ಇವರು ಕನ್ನಡ ಭಾಷೆ ಮಾತನಾಡುತ್ತಾರೆ.

ಪ್ರಕರಣ 4: ತಮ್ಮನ ಮನೆಗೆ ಬಂದಿದ್ದ ವ್ಯಕ್ತಿ ಕಣ್ಮರೆ
ಇತ್ತೀಚೆಗೆ 2026ರ ಏಪ್ರಿಲ್ 24ರಂದು ಗಣೇಶಪುರ ಗ್ರಾಮದ ತಮ್ಮ ತಮ್ಮನ ಮನೆಗೆ ಬಂದಿದ್ದ ಮಂಜುನಾಥ್ ಫಕೀರಪ್ಪ ಭೋವಿವಡ್ಡರ (35) ಎಂಬುವವರು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಂದಿಲ್ಲ. ಗೋಧಿ ಮೈಬಣ್ಣ, ದುಂಡನೆಯ ಮುಖ, 5.6 ಅಡಿ ಎತ್ತರ ಹೊಂದಿರುವ ಇವರು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಇವರು ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.
ಕಂಟ್ರೋಲ್ ರೂಮ್ ಹಾಗೂ ಪೊಲೀಸರ ಮನವಿ
ಈ ಮೇಲ್ಕಂಡ ಚಹರೆಯುಳ್ಳ ವ್ಯಕ್ತಿಗಳ ಕುರಿತು ಯಾವುದೇ ಮಾಹಿತಿ ಅಥವಾ ಸುಳುವು ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ಮುಂಡಗೋಡ ಪೊಲೀಸ್ ತನಿಖಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
ಕಾರವಾರ ಪೊಲೀಸ್ ಕಂಟ್ರೋಲ್ ರೂಮ್: 08382-226550
ಮುಂಡಗೋಡ ಪೊಲೀಸ್ ಠಾಣೆ: 08301-222211
ಮುಂಡಗೋಡ ಪಿ.ಎಸ್.ಐ.: 9480805275
ಮುಂಡಗೋಡ ಪಿ.ಐ.: 9480805258
